Site icon Vistara News

Kantara Movie: ಕಾಂತಾರ-2 ಚಿತ್ರದಲ್ಲಿ ಊರ್ವಶಿ ರೌಟೇಲಾ ಇರ್ತರಾ?ಅಸಲಿ ಸತ್ಯ ಏನು?

Kantara Movie Urvashi Rautela is not part of Rishab Shetty's Kantara 2

ಬೆಂಗಳೂರು: ನಟಿ ಊರ್ವಶಿ ರೌಟೇಲಾ ಅವರು ರಿಷಬ್‌ ಶೆಟ್ಟಿ ಜತೆ ಕಾಣಿಸಿಕೊಂಡಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೂಲವೊಂದು ಸಿನಿಮಾದಲ್ಲಿ ಊರ್ವಶಿ ರೌಟೇಲಾ ಇಲ್ಲ ಎಂದು ಸ್ಪಷ್ಟಪಡಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ (Kantara Movie ) ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಕಾಂತಾರ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು ರಿಷಬ್‌. ಸದ್ಯ ಕಾಂತಾರ-2 ಪ್ರಿಕ್ವೆಲ್‌ ಸಿನಿಮಾ ಮಾಡಲು ಮುಂದಾಗಿದ್ದಾರೆ.

ನಟಿ ಊರ್ವಶಿ ರೌಟೇಲಾ ಅವರು ರಿಷಬ್‌ ಶೆಟ್ಟಿ ಜತೆ ಕಾಣಿಸಿಕೊಂಡಿದ್ದಾರೆ. ರಿಷಬ್‌ ಜತೆಗಿನ ಫೋಟೊವನ್ನು ನಟಿ ಹಂಚಿಕೊಂಡಿದ್ದಾರೆ. ಊರ್ವಶಿ ರೌಟೇಲಾ ಕಾಂತಾರ ಪ್ರಿಕ್ವೆಲ್‌ನ ಭಾಗವಾಗಿರಬಹುದು ವದಂತಿಗಳು ಹಬ್ಬಿತ್ತು. ಇದೀಗ ಹೊಂಬಾಳೆ ಫಿಲಂಸ್‌ನ ಆಪ್ತ ಮೂಲವೊಂದು ಈ ಚಿತ್ರದಲ್ಲಿ ಊರ್ವಶಿ ರೌಟೇಲಾ ಇಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದೆ. ʻʻಕಾಂತಾರ 2 ರಲ್ಲಿ ಊರ್ವಶಿ ರೌಟೇಲಾ ಪಾತ್ರವನ್ನು ವಹಿಸುತ್ತಾರೆ ಎಂಬ ಎಲ್ಲಾ ವದಂತಿಗಳು ಸುಳ್ಳು. ಇತ್ತೀಚೆಗಷ್ಟೇ ರಿಷಬ್‌ ಶೆಟ್ಟಿ ಇದ್ದ ಹೊಟೇಲ್‌ನಲ್ಲಿ ಊರ್ವಶಿ ಸಹ ಇದ್ದರು. ಈ ವೇಳೆ ರಿಷಬ್‌ ಅವರನ್ನು ಭೇಟಿ ಮಾಡಿಸುವಂತೆ ಊರ್ವಶಿ ಕೇಳಿದ್ದರು. ಅದಕ್ಕೆ ಅಷ್ಟೇ ನಯವಾಗಿ ಒಪ್ಪಿದ ರಿಷಬ್‌, ಊರ್ವಶಿ ಅವರನ್ನು ಭೇಟಿಯಾಗಿದ್ದಾರೆ. ಫೋಟೊವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೊವನ್ನು ಊರ್ವಶಿ ಶೇರ್‌ ಮಾಡಿದ್ದಾರೆ” ಎಂದು ಹೇಳಲಾಗಿದೆ.

ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಭಾನುವಾರ, ಫೆಬ್ರವರಿ 11 ರಂದು, ಊರ್ವಶಿ ರೌಟೇಲಾ ಅವರು ರಿಷಬ್ ಶೆಟ್ಟಿ ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಕಾಂತಾರ-2 ಎಂದು ಹ್ಯಾಶ್‌ಟ್ಯಾಗ್‌ ನೀಡಿದ್ದಾರೆ.

ಇದನ್ನೂ ಓದಿ: Kantara Movie: ಕಾಂತಾರ-2ಗೆ ಊರ್ವಶಿ ರೌಟೇಲಾ? ರಿಷಬ್‌ ಶೆಟ್ಟಿ ಜತೆ ಫೋಟೊ ಹಂಚಿಕೊಂಡ ನಟಿ

ಕಾಂತಾರ ಚಿತ್ರದ ಎರಡನೇ ಭಾಗ ಸಿದ್ಧವಾಗಲಿದೆ ಎಂದು ರಿಷಬ್‌ ಶೆಟ್ಟಿ ಘೋಷಿಸುತ್ತಿದ್ದಂತೆ, ಇತ್ತ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇರಲಿದ್ದಾರೆ? ಹೊಸಬರಾಗಿ ಯಾರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಅದರಂತೆ ಅದೇ ಸಮಯಕ್ಕೆ ನಟಿ ಊರ್ವಶಿ ರೌಟೇಲಾ ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಜತೆಗಿನ ಫೋಟೋ ಹಂಚಿಕೊಂಡು, ‘ಕಾಂತಾರ 2’ ಲೋಡಿಂಗ್‌ ಎಂದು ಪೋಸ್ಟ್‌ ಮಾಡಿದ್ದರು.

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Kantara Movie: ಕಾಂತಾರ ತಂಡಕ್ಕೆ ಸಿಹಿ ಸುದ್ದಿ: ಕೇರಳ‌ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಕಾಂತಾರ-1 ಚಿತ್ರದಲ್ಲಿ ನಾಯಕ ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು.

Exit mobile version