ಬೆಂಗಳೂರು : ಕಾಂತಾರ ಸಿನಿಮಾದ (Kantara Movie) ʻವರಾಹ ರೂಪಂʼ ಹಾಡು ಸಾಕಷ್ಟು ಚರ್ಚೆಯಲ್ಲಿತ್ತು. ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ʻʻಸಿನಿಮಾದ ಕ್ಲೈಮ್ಯಾಕ್ಸ್ ಹಾಡು ವರಾಹ ರೂಪಂ ಮ್ಯೂಸಿಕ್ ಕದ್ದಿಲ್ಲ. ಜನರನ್ನು ಹಾದಿ ತಪ್ಪಿಸುವ ಕೆಲಸ ಆಗುತ್ತಿದೆʼʼ ಎಂದು ರಿಷಬ್ ಶೆಟ್ಟಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ರಿಷಬ್ ದಂಪತಿ, ಕೆಲ ಕಾಲ ಸಿನಿಮಾ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಮಾಧ್ಯಮಗಳಿಗೆ ಉತ್ತರಿಸಿದ ರಿಷಬ್ ʻʻಯಾವುದೇ ಕಾರಣಕ್ಕೂ ವರಾಹ ರೂಪಂ ಕದ್ದ ಮ್ಯೂಸಿಕ್ ಅಲ್ಲ, ನಾವು ಸಾಬೀತು ಪಡಿಸುತ್ತೇವೆʼʼ ಎಂದು ಹೇಳಿಕೆ ನೀಡಿದ್ದಾರೆ.
ಕಾಂತಾರಕ್ಕೆ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ | Kantara Movie | ಕಾಂತಾರ ಹಿಂದಿ ರಿಮೇಕ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಸೂಪರ್ ಹಿಟ್ ಕನ್ನಡ ಸಿನಿಮಾ ಕಾಂತಾರದ ಜನಪ್ರಿಯ ಹಾಡು ವರಾಹ ರೂಪಂ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಶನ್ಸ್ ಕೋರ್ಟ್ ತಡೆ ನೀಡಿತ್ತು. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕ ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್, ಯೂಟ್ಯೂಬ್, ಸ್ಪೋಟಿಫೈ, ವಿಂಕ್, ಜಿಯೋ ಸಾವನ್ ಸೇರಿದಂತೆ ಇನ್ನಿತರ ಆನ್‌ಲೈನ್ ವೇದಿಕೆಗಳಿಗೆ ಆದೇಶ ಹೊರಡಿಸಿತ್ತು. ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ನಾವು ಐದು ವರ್ಷದ ಹಿಂದೆ ರಚಿಸಿ ಬಿಡುಗಡೆ ಮಾಡಿದ್ದ ನವರಸಂ ಹಾಡಿನ ಕಾಪಿ ಎಂಬುದಾಗಿ ತೈಕುಡಂ ಬ್ರಿಜ್ ಎಂಬ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್ ಹಾಡಿನ ಪ್ರಸರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು.
ವೀರೇಂದ್ರ ಹೆಗ್ಗಡೆ ಅವರು ಕುಟುಂಬ ಸಮೇತ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದರು. ಮತ್ತು ಚಿತ್ರದ ಕುರಿತು ಮೆಚ್ಚುಗೆಯನ್ನೂ ಸೂಚಿಸಿದ್ದರು. ಹಾಗಾಗಿ ರಿಷಬ್ ಮತ್ತೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಗರುಡ ಮಾಲ್‌ನಲ್ಲಿ ನವೆಂಬರ್ 2ರಂದು ಸಿನಿಮಾ ವೀಕ್ಷಿಸಿದ್ದಾರೆ. ವಿಶ್ವದೆಲ್ಲೆಡೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ | Kantara Movie | ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್