ಬೆಂಗಳೂರು : ಸೂಪರ್ ಹಿಟ್ ಕನ್ನಡ ಸಿನಿಮಾ ಕಾಂತಾರದ ಜನಪ್ರಿಯ ಹಾಡು ʻವರಾಹ ರೂಪಂʼ (Kantara Movie) ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ನವೆಂಬರ್ 11 ಶುಕ್ರವಾರ ಡಿಲೀಟ್ ಆಗಿದೆ. ಮಾತೃಭೂಮಿ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಕ್ಲೈಮ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಜಿಯೋ ಸಾವನ್‌ನಲ್ಲಿ ವರಾಹ ರೂಪಂ ಹಾಡು ಲಭ್ಯವಿದೆ. ಈಗಾಗಲೇ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿಯೂ ಹಾಡನ್ನು ಪ್ರಸಾರ ಮಾಡುತ್ತಿದೆ.
ಏನಿತ್ತು ಕೋರ್ಟ್ ಆದೇಶ?
ಈ ಹಿಂದೆ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಷನ್ಸ್ ಕೋರ್ಟ್ ತಡೆ ನೀಡಿತ್ತು. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕ ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್, ಯುಟ್ಯೂಬ್, ಸ್ಪೋಟಿಫೈ, ವಿಂಕ್, ಜಿಯೋ ಸಾವನ್ ಸೇರಿದಂತೆ ಇನ್ನಿತರ ಆನ್‌ಲೈನ್ ವೇದಿಕೆಗಳಿಗೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ | Kantara Movie | ʻವ್ಯಕ್ತಿಯನ್ನು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲʼ: ಮಾಲಿವುಡ್ ನಟಿ ಮಂಜು ಪಾತ್ರೋಜ್!
ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ನಾವು ಐದು ವರ್ಷದ ಹಿಂದೆ ರಚಿಸಿ ಬಿಡುಗಡೆ ಮಾಡಿದ್ದ ನವರಸಂ ಹಾಡಿನ ಕಾಪಿ ಎಂಬುದಾಗಿ ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್ ಹಾಡಿನ ಪ್ರಸರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ತಡೆಯಾಜ್ಞೆ ತಂದಿರುವ ವಿಚಾರವನ್ನು ತೈಕುಡಂ ಬ್ರಿಜ್ ಮ್ಯೂಸಿಕ್ ಸಂಸ್ಥೆ, ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಮೊರೆ ಹೋಗಿತ್ತು. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿತ್ತು.
ರಿಷಬ್ ಶೆಟ್ಟಿ ಹೇಳಿದ್ದೇನು?
ʻʻಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡನ್ನು ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ನಾವು ಸಾಬೀತುಪಡಿಸುತ್ತೇವೆʼʼ ಎಂದು ರಿಷಬ್ ಶೆಟ್ಟಿ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಎರಡೆರಡು ಕೋರ್ಟ್‌ನಿಂದ ಕಾಂತಾರ ಸಿನಿಮಾಗೆ ಆದೇಶ ಬಂದಾಗಿದೆ. ಆದರೆ ಇದೀಗ ಹೊಂಬಾಳೆ ಫಿಲ್ಮ್ಸ್ ಹಾಡನ್ನೇ ಡಿಲೀಟ್ ಮಾಡಿದೆ. ಮುಂದೆ ಚಿತ್ರತಂಡ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Kantara movie | ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ ಆರೋಪ: ಪ್ರದರ್ಶನ ನಿಲ್ಲಿಸಲು ಒತ್ತಾಯ