Site icon Vistara News

Kantara Movie | ವರಾಹ ರೂಪಂ ಹಾಡಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ

Kantara Movie

ಬೆಂಗಳೂರು: ಕಾಂತಾರ ಸಿನಿಮಾದ ʻವರಾಹಂ ರೂಪಂʼ (Kantara Movie) ಹಾಡಿನ ವಿವಾದಕ್ಕೆ ಸಂಬಂಧಿಸಿ ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡ ಹೂಡಿದ್ದ ದಾವೆಯನ್ನು ತಿರಸ್ಕರಿಸಿದ್ದ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್‌ ತಡೆ ನೀಡಿದೆ. ಅಂದರೆ, ಈಗ ಕಾಂತಾರ ಚಿತ್ರ ತಂಡಕ್ಕೆ ಹಿನ್ನಡೆ ಆದಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಸೋಮರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೊಂಬಾಳೆ ಫಿಲ್ಮ್ಸ್‌, ರಿಷಬ್‌ ಶೆಟ್ಟಿ, ಪೃಥ್ವಿರಾಜ್‌ ಫಿಲ್ಮ್ಸ್‌, ಅಮೆಜಾನ್‌ ಸೆಲ್ಲರ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಗೂಗಲ್‌ ಇಂಡಿಯಾ ಪ್ರಧಾನ ಕಚೇರಿ, ಸ್ಪಾಟಿಫೈ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿದೆ.

ʻವರಾಹ ರೂಪಂʼ ಮಲಯಾಳಂ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ನಕಲು ಮಾಡಲಾಗಿದೆ ಎಂದು ತೈಕುಡಂ ಬ್ರಿಜ್‌ ಮ್ಯೂಸಿಕ್‌ ತಂಡ ಆರೋಪ ಮಾಡಿ ಕೋರ್ಟ್‌ ಮೆಟ್ಟಿಲೇರಿತ್ತು. ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಾಡಿನ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಸೂಚಿಸಿತ್ತು. ಇತ್ತ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ, ಕಾಂತಾರ ತಂಡ ಹೈಕೋರ್ಟ್‌ ಮೊರೆ ಹೊಕ್ಕಿತ್ತು. ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಆದರೆ ಈ ಮಧ್ಯೆ ಜಿಲ್ಲಾ ನ್ಯಾಯಾಲಯವು, ವರಾಹ ರೂಪಂ ಹಾಡಿನ ನಿರ್ಬಂಧ ಆದೇಶಕ್ಕೆ ತಡೆ ನೀಡಿತ್ತು. ಅಂದರೆ ಈ ಹಾಡನ್ನು ಕಾಂತಾರ ಚಿತ್ರತಂಡ ಬಳಸಬಹುದಾಗಿತ್ತು. ಇದೀಗ ಕೇರಳ ಹೈಕೋರ್ಟ್‌ ತೈಕುಡಂ ಬ್ರಿಜ್‌ ಮ್ಯೂಸಿಕ್‌ ತಂಡದ ಪರವಾಗಿ ತೀರ್ಪು ನೀಡಿದೆ. ಕಾಂತಾರ ಮತ್ತು ಅದರ ಸಂಗೀತ ನಿರ್ದೇಶಕ ಬಿ ಅಜನೀಶ್‌ ಲೋಕನಾಥ್‌ ಅವರು ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ | Kantara Movie | ನಟ ಅನುಪಮ್‌ ಖೇರ್‌ ಜತೆ ರಿಷಬ್‌ ಶೆಟ್ಟಿ: ನಿರ್ದೇಶಕ ಮಧುರ್ ಭಂಡಾರ್ಕರ್ ಹೇಳಿದ್ದೇನು?

Kantara Movie

ʼನವರಸಂʼನ ಹಕ್ಕುಸ್ವಾಮ್ಯ ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್‌ ಮತ್ತು ಪಬ್ಲಿಷಿಂಗ್‌ ಕಂಪೆನಿ ಲಿಮಿಟೆಡ್‌ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆರಂಭದಲ್ಲಿ ʼವರಾಹ ರೂಪಂʼ ಗೀತೆಯನ್ನು ಸಿನಿಮಾ, ಚಿತ್ರಮಂದಿರ ಮತ್ತು ಸ್ಟ್ರೀಮಿಂಗ್‌ ವೇದಿಕೆಯಲ್ಲಿ ಬಳಸಕೂಡದಂತೆ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಳಿಕ್ಕೋಡ್ (ಕಲ್ಲಿಕೋಟೆ) ಜಿಲ್ಲಾ ನ್ಯಾಯಾಲಯಗಳು ತಾತ್ಕಾಲಿಕ ಆದೇಶ ನೀಡಿತ್ತು.

ಹಿಂದೆ ಏನೇನಾಗಿತ್ತು?
ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಳಿಕ್ಕೋಡ್ (ಕಲ್ಲಿಕೋಟೆ) ಜಿಲ್ಲಾ ನ್ಯಾಯಾಲಯವು ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡಿನ ಬಳಕೆಯನ್ನು ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಈ ಹಿಂದೆ ನೀಡಿತ್ತು. ಇದರ ವಿರುದ್ಧ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ನವೆಂಬರ್‌ 23ರಂದು ಬುಧವಾರ ವಜಾಗೊಳಿಸಿತ್ತು. ಪರ್ಯಾಯ ಕಾನೂನು ಪರಿಹಾರ ಪಡೆಯುವುದಕ್ಕೆ ಅರ್ಜಿದಾರರು ಸ್ವತಂತ್ರರು ಎಂದು ನ್ಯಾಯಪೀಠ ಇದೇ ವೇಳೆ ಹೇಳಿತ್ತು. ಅಧೀನ ನ್ಯಾಯಾಲಯಗಳು ನೀಡಿದ ಮಧ್ಯಂತರ ಆದೇಶದಲ್ಲಿ ಆ ನ್ಯಾಯಾಲಯದ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯಲ್ಲಿ ನಾವು ಮಧ್ಯಸ್ಥಿಕೆ ವಹಿಸಬಾರದು. ಒಂದು ವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ ಎಂದು ಅರ್ಜಿಯನ್ನು ವಜಾಗೊಳಿಸಿತ್ತು.

ಇದನ್ನೂ ಓದಿ | Kantara Movie | ಕರಾವಳಿಯಲ್ಲಿ ಇಂದಿನಿಂದ ತುಳು ಕಾಂತಾರ: ದೈವದ ಕುರಿತು ರಿಷಬ್‌ ಹೇಳಿದ್ದೇನು?

Exit mobile version