ಬೆಂಗಳೂರು: ʻಕಾಂತಾರʼ ಸಿನಿಮಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh Loknath) ಅವರು ತಮ್ಮ ಮೊದಲ ಮರಾಠಿ ಚಿತ್ರ ʻಸರಿʼʼ ಸಿನಿಮಾಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ʻಸರಿʼ ಸಿನಿಮಾ ಕನ್ನಡದ ದಿಯಾ ಸಿನಿಮಾದ ರಿಮೇಕ್. ಈಗಾಗಲೇ ಅಜನೀಶ್ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಈ ಸಿನಿಮಾ ಮೂಲಕ ಮರಾಠಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.
2020ರ ಕನ್ನಡ ಚಲನಚಿತ್ರ ʻದಿಯಾʼ ರೀಮೇಕ್ ಇದಾಗಿದೆ. ಮೇ 5ರಂದು ʻಸರಿʼ ಸಿನಿಮಾ ಬಿಡುಗಡೆಯಾಗಿದೆ. ಮೂಲ ಚಿತ್ರವನ್ನು ನಿರ್ದೇಶಿಸಿದ ಕನ್ನಡ ನಿರ್ದೇಶಕ ಕೆ ಎಸ್ ಅಶೋಕ ಅವರೇ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಮಾತನಾಡಿ ʻಮರಾಠಿ ಚಿತ್ರವೊಂದಕ್ಕೆ ಇದೆ ಮೊದಲ ಬಾರಿ ಸಂಗೀತ ಮಾಡಿರುವುದು. ಈ ಅನುಭವದಿಂದ ತುಂಬ ಸಂತೋಷವಾಗಿದೆʼʼ ಎಂದು ಅಜನೀಶ್ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದರು. ಅಮಿತ್‌ರಾಜ್ ಮತ್ತು ಅರ್ಜಿತ್ ಚಕ್ರವರ್ತಿ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಎಂದು ಹೇಳಿಕೆ ನೀಡಿದರು.
“ನಾವು ಈ ಕಥೆಯನ್ನು ಬಹಳ ಸರಳವಾಗಿ ಪ್ರಸ್ತುತಪಡಿಸಿದ್ದೇವೆ. ಆದರೂ ಇದು ಮನಸ್ಸಿನಲ್ಲಿ ಆಳವಾಗಿ ಬೇರುರುವ ಸಿನಿಮಾ. ಸಂಬಂಧಗಳ ಕುರಿತಾದ ಸಿನಿಮಾ. ಸಂಗೀತವನ್ನು ತುಂಬ ಹೃದಯದಿಂದ ಸಂಯೋಜಿಸಲಾಗಿದೆ. ಥಿಯೇಟರ್‌ನಿಂದ ಹೊರಬಂದ ನಂತರವೂ ಕಥೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ” ಎಂದು ನಿರ್ದೇಶಕ ಅಶೋಕ ಹೇಳಿದರು.
ಇದನ್ನೂ ಓದಿ: Actress Kushi Ravi : ಕೆ.ಆರ್.ಮಾರ್ಕೆಟ್‌ನಲ್ಲಿ ಹೂವುಗಳ ಮಧ್ಯೆ ‘ಫೋಕಸ್’ ಆದ ದಿಯಾ ಬ್ಯೂಟಿ
ಮೂಲ ಚಿತ್ರದಲ್ಲಿದ್ದ ಪೃಥ್ವಿ ಅಂಬಾರ್ ಬಿಟ್ಟರೆ, ಮರಾಠಿ ಕಲಾವಿದರೇ ಅಭಿನಯಿಸಿದ್ದಾರೆ. ದಿಯಾ ಪಾತ್ರದಲ್ಲಿ ರಿತಿಕಾ ಶ್ರೋತ್ರಿ ಅಭಿನಯಿಸಿದ್ದಾರೆ. ದೀಕ್ಷಿತ್ ಪಾತ್ರದಲ್ಲಿ ನಟ ಅಜಿಂಕ್ಯಾ ರಾವುತ್ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಇತ್ತೀಚೆಗೆ ʻವಿರೂಪಾಕ್ಷʼ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಚಿತ್ರದಲ್ಲಿ ಸಾಯಿ ಧರಮ್ ತೇಜ್, ಸಂಯುಕ್ತಾ ಮೆನನ್, ಸುನೀಲ್, ರಾಜೀವ್ ಕಣಕಾಲ, ಬ್ರಹ್ಮಾಜಿ, ಅಜಯ್ ಮತ್ತು ರವಿಕೃಷ್ಣ ನಟಿಸಿದ್ದಾರೆ.