Site icon Vistara News

Kantara Telugu | ತೆಲುಗು ರಾಜ್ಯಗಳಲ್ಲೂ ಕಾಂತಾರ ಸಿನಿಮಾಗೆ ಜೈಕಾರ

Kantara Telugu

ಹೈದರಾಬಾದ್: ರಿಷಬ್ ಶೆಟ್ಟಿ ನಿರ್ದೇಶನದ, ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ‘ಕಾಂತಾರ’ ದೊಡ್ಡ ಗೆಲವು ಸಾಧಿಸಿದೆ. ಜಗತ್ತೇ ಮತ್ತೊಮ್ಮೆ ಕನ್ನಡ ಸಿನಿಮಾಗಳನ್ನು ತಿರುಗಿ ನೋಡುವಂತೆ ಮಾಡಿದೆ ಈ ಕಾಂಬಿನೇಷನ್. ಕರ್ನಾಟಕದಲ್ಲಿ ‘ಕಾಂತಾರ’ದ ಅಬ್ಬರ ನೋಡಿ ಭಾರತದ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಈ ಪೈಕಿ ಹಿಂದಿ ವರ್ಷನ್ ಉತ್ತರ ಭಾರತದಲ್ಲಿ ಅಲೆ ಎಬ್ಬಿಸಿದ್ದರೆ, ನೆರೆಯ ತೆಲುಗು (Kantara Telugu) ರಾಜ್ಯಗಳಲ್ಲೂ ‘ಕಾಂತಾರ’ ದಾಖಲೆ ಬರೆದಿದೆ.

ಈಗಾಗಲೇ ₹100 ಕೋಟಿ ಕ್ಲಬ್​​ಗೆ ಸಮೀಪದಲ್ಲಿರುವ ‘ಕಾಂತಾರ’ ಸ್ಯಾಂಡಲ್​ವುಡ್​​ಗೆ ಮತ್ತೆ ಹೊಸ ಖದರ್ ತಂದುಕೊಟ್ಟಿದೆ. ಕಡಿಮೆ ಬಜೆಟ್​ನ ಸಿನಿಮಾ ಕೂಡ ಇಷ್ಟು ದೊಡ್ಡ ಮೊತ್ತದ ಹಣಗಳಿಸಿ ದಾಖಲೆ ಬರೆಯಬಹುದು ಎಂಬುದನ್ನ ಚಂದನವನದ ಕಾಂತಾರ ತೋರಿಸಿಕೊಟ್ಟಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಡುಗಡೆಯಾದ ಮೊದಲ ದಿನವೇ ಭಾರಿ ಮೊತ್ತದ ಹಣ ಗಳಿಸಿರುವ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ, ಪರಭಾಷೆಯ ಚಿತ್ರಗಳಿಗೂ ನಡುಕ ಹುಟ್ಟಿಸಿದೆ.

ಟಿಕೆಟ್ ಖಾಲಿ!
ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಚಿತ್ರಮಂದಿರದ ಸ್ಕ್ರೀನ್​ಗಳಲ್ಲಿ ಕಾಂತಾರ ಅಬ್ಬರಿಸುತ್ತಿದೆ. ಮೊದಲ ದಿನ ಇದೇ ಚಿತ್ರಮಂದಿರದಲ್ಲಿ 6 ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಈ ಆರೂ ಪ್ರದರ್ಶನಗಳ ಟಿಕೆಟ್ ಸೋಲ್ಡ್​ ಔಟ್ ಆಗಿಬಿಟ್ಟಿತ್ತು. ಹೈದರಾಬಾದ್‌ನ ಗಚ್ಚಿಬೌಲಿಯ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಚಿತ್ರಮಂದಿರದಲ್ಲಿ ಕೆಜಿಎಫ್-2 ಬಳಿಕ ಮತ್ತೊಂದು ಕನ್ನಡದ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿದೆ.

ಎಎಂಬಿ ಸಿನಿಮಾಸ್ ತುಸು ಕಾಸ್ಟ್ಲಿ, ಆದರೂ ‘ಕಾಂತಾರ’ ನೋಡಲು ಬಂದಿದ್ದ ಪ್ರೇಕ್ಷಕ ಪ್ರಭುಗಳಿಗೆ ಇದು ಲೆಕ್ಕಕ್ಕೇ ಇರಲಿಲ್ಲ. ‘ಎಎಂಬಿ’ ಚಿತ್ರಮಂದಿರದಲ್ಲಿ ₹350 & ₹295 ರೂಪಾಯಿ ಟಿಕೆಟ್ ರೇಟ್ ಫಿಕ್ಸ್ ಆಗಿರುತ್ತದೆ. ಆದರೂ 6 ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗುವ ಮೂಲಕ ‘ಕಾಂತಾರ’ ತನ್ನ ಖದರ್ ತೋರಿಸಿದೆ. ಈ ಮೂಲಕ ಪರಭಾಷೆ ಚಿತ್ರಗಳಿಗೂ ಕನ್ನಡ ಸಿನಿಮಾಗಳು ಸವಾಲು ಹಾಕುತ್ತಿವೆ. ಜೇಮ್ಸ್, ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ ರೀತಿಯೇ ‘ಕಾಂತಾರ’ ಜಾಗತಿಕ ಸಿನಿಮಾ ಮಾರುಕಟ್ಟೆ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Kantara Movie | ಹೊರ ರಾಜ್ಯಗಳಲ್ಲೂ ಕನ್ನಡಿಗರ ಕಾಂತಾರ ಹವಾ ಜೋರು!

Exit mobile version