ಬೆಂಗಳೂರು: ಧಿಗ್ಗನೆ ಹೊತ್ತಿ ಉರಿಯುವ ಜ್ವಾಲೆಗಳ ನಡುವೆ ಕಂಬಳದ ಕೋಣಗಳ ಭಾರಿ ತುರುಸಿನ ಓಟದ ಪೋಸ್ಟರ್ ಮೂಲಕ ಗಮನ ಸೆಳೆದ ʻಕಾಂತಾರʼ ಸಿನಿಮಾ ಈಗಾಗಲೇ ಸಾಕಷ್ಟು ಕಾತರವನ್ನು ಸೃಷ್ಟಿಸಿದೆ. ವಿಜಯ್ ಕಿರಗಂದೂರು ನಿರ್ಮಾಣ ಮತ್ತು ರಿಷಭ್ ಶೆಟ್ಟಿ ಅಭಿನಯ, ನಿರ್ದೇಶನದಿಂದಾಗಿ ಕುತೂಹಲ ಕೆರಳಿಸಿರುವ ಈ ಚಿತ್ರವನ್ನು ಮುಂದಿನ ದಸರಾ ಹಬ್ಬದೊಂದಿಗೆ ಸವಿಯಬಹುದು!
ಹೌದು, ಇಡೀ ಚಿತ್ರರಂಗ ಅಚ್ಚರಿ, ಬೆರಗಿನೊಂದಿಗೆ ಕಾಯುತ್ತಿರುವ ಕಾಂತಾರ ಸೆಪ್ಟೆಂಬರ್ 30ರಂದು ತೆರೆ ಕಾಣಲಿದೆ.
ʻದಸರಾದ ಜತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ.. ಸೆಪ್ಟೆಂಬರ್ 30ರಂದು ಬಯಲಾಟಕ್ಕೆ ಸಾಕ್ಷಿಯಾಗಿʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಸ್ವತಃ ರಿಷಭ್ ಶೆಟ್ಟಿ ಹಂಚಿಕೊಂಡಿದ್ದಾರೆ. ರಿಷಭ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನ ಅಧಿಕೃತ ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಲಾಗಿದೆ.
ರಿಷಭ್ ಶೆಟ್ಟಿ ಅವರ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಚಿತ್ರವು ದಕ್ಷಿಣ ಕನ್ನಡ ಪ್ರಾಂತ್ಯದ ಸಾಂಪ್ರದಾಯಿಕ ಶ್ರೀಮಂತಿಕೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ರೋಮಾಂಚಕವಾಗಿದ್ದು, ಅದನ್ನು ಈಗಾಗಲೇ 21 ಲಕ್ಷ ಮಂದಿ ನೋಡಿದ್ದಾರೆ. ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಇರುವ ಕುತೂಹಲಕ್ಕೆ ಇದು ಸಾಕ್ಷಿಯಾಗಿದೆ. ಟ್ರೇಲರ್ ಚಿತ್ರದ ಮೇಕಿಂಗ್ ಹಾಗೂ ಕಥೆ ಅದ್ಭುತವಾಗಿರಬಹುದು ಎಂಬ ಭರವಸೆ ಮೂಡಿಸಿದೆ.
ಏನಿರಬಹುದು ಕಾಂತಾರದ ಕಥೆ?
ʼಕಾಂತಾರʼ ಎಂಬ ಶೀರ್ಷಿಕೆಯೇ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಇದರ ಅರ್ಥ ಸೂರ್ಯನ ಬಿಸಿಲೇ ಬೀಳದ ಕಾಡು ಎಂದರ್ಥ. ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಶ್ರೀದೇವಿ ದುಷ್ಟರನ್ನು ಸದೆಬಡಿಯಲು ಕದಂಬ ಕಾಂತಾರದಲ್ಲಿ ನೆಲೆಸಿರುತ್ತಾಳೆ ಎಂದು ತೋರಿಸಲಾಗುತ್ತದೆ. ಕಂಬಳ ಕ್ಷೇತ್ರದಲ್ಲೀ ಕಾಂತಾವರ ಎಂಬ ಹೆಸರು ಜನಪ್ರಿಯವಾಗಿದೆ. ಇದೆಲ್ಲವನ್ನೂ ಜೋಡಿಸಿಕೊಂಡು ಕಾಂತಾರದ ಕಥೆ ಹೆಣೆದಿರುವ ಸಾಧ್ಯತೆ ಇದೆ.
ಕದಂಬ ಕೌಶಿಕೆ ರೂಪದಲ್ಲಿರುವ ಶ್ರೀದೇವಿ ಕಾಂತಾರದಲ್ಲಿ ನೆಲೆ ನಿಂತು ಆಕಾಶದಿಂದಲೇ ಭೂಮಿಗೆ ಇಳಿಸಲ್ಪಟ್ಟ ಸ್ವರ್ಣದುಯ್ಯಾಲೆಯಲ್ಲಿ ಕುಳಿತಿರುತ್ತಾಳೆ. ಅಲ್ಲಿಗೆ ಚಂಡ ಮುಂಡರು, ಶುಂಭ ನಿಶುಂಭರನ್ನು ಅಲ್ಲಿಗೇ ಬರುವಂತೆ ಮಾಡಿ ತರಿಯುತ್ತಾಳೆ. ಈ ಕಥೆಗೂ ಕಂಬಳಕ್ಕೂ ಏನನ್ನೋ ತಳುಕು ಹಾಕಿ ಕಥೆ ಹೆಣೆದಿರುವ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಯತ್ತಿದೆ. ಇನ್ನೊಂದು ಕಡೆ ಇದೊಂದು ದೆವ್ವದ ಕಥೆ ಇರಬಹುದು ಎಂಬ ಮಾತೂ ಇದೆ. ಅಂತೂ ಎಲ್ಲರೂ ಮಾತನಾಡಿಕೊಳ್ಳುವಂತೆ ಮಾಡಿದೆ ಕಾಂತಾರ. ಇನ್ನೊಂದು ಊಹೆಯಂತೆ ಇದು ಕಂಬಳದೊಂದಿಗೆ ಬೆಸೆದುಕೊಂಡು ರೂಪಿಸಲಾದ ಕಾಡುಗಳ್ಳರ ಕಥೆಯೂ ಇರಬಹುದು. ಕಾಡಿಗೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುಷ್ಟ ಕೂಟದ ಕಥೆಯೂ ಇರಬಹುದು ಎನ್ನಲಾಗುತ್ತಿದೆ.
ಕರಾವಳಿಯಿಂದಲೇ ಬಂದಿರುವ ರಿಷಭ್ ಶೆಟ್ಟಿ ಅಲ್ಲಿನ ನೇಟಿವಿಟಿಯನ್ನೇ ಬಳಸಿಕೊಂಡು ಕಥೆ ಮಾಡಿದ್ದಾರೆ. ಆದರೆ, ಅದನ್ನು ಇಡೀ ಕನ್ನಡ ಸಿನಿಮಾ ಲೋಕಕ್ಕೆ ಹೊಂದಿಕೊಳ್ಳುವಂತೆ ಡೆವಲಪ್ ಮಾಡಿರುವ ಸಾಧ್ಯತೆ ಇದೆ.
ರಿಷಭ್ ಶೆಟ್ಟಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಪಂಚಮಿ ಗೌಡ ಚಿತ್ರದ ನಾಯಕಿ.
ಇದನ್ನೂ ಓದಿ: 777 Charlie : ವೇಸ್ಟ್ ಬಾಡಿ ಚಾರ್ಲಿ ಸೂಪರ್ ಹೀರೊ ಆಗಿದ್ದು ಹೀಗೆ