ಬೆಂಗಳೂರು: ಕರ್ನಾಟಕದ ಜೀವನದಿಯಾದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ನೀಡಿರುವ ಬಂದ್ ಕರೆಗೆ (Karnataka Bandh) ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಬಹುತೇಕ ಭಾಗ ಸ್ತಬ್ಧವಾಗಿದ್ದು, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಬಂದ್ (Karnataka Band) ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಕೂಡ ಇದೆ. 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಚಿತ್ರರಂಗದಿಂದ ಪ್ರತ್ಯೇಕ ಹೋರಾಟವಿದೆ. ಆದರೆ ಸ್ಯಾಂಡಲ್‌ವುಡ್ ಹಲವು ಸ್ಟಾರ್‌ಗಳು ಪ್ರತಿಭಟನೆಗೆ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.
ಸೆ.29ರಂದು 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಈ ಮುಂಚೆಯೇ ಮಾಧ್ಯಮದ ಮುಂದೆ ತಿಳಿಸಿದ್ದರು. ಅಷ್ಟೇ ಅಲ್ಲದೇ ನೂತನ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಂದ ಬೆಂಬಲ ಸೂಚಿಸಲು ನಟರುಗಳ ಜತೆ ಮಾತುಕತೆ ಕೂಡ ನಡೆಸಿದ್ದರು. ಆದರೀಗ ಕೆಲವು ಸ್ಟಾರ್ಸ್‌ಗಳು ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಲಂಡನ್‌ನಲ್ಲಿದ್ದು ಮುಂಬರುವ ಸಿನಿಮಾದ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಮಹಾಬಲಿಪುರಂನಲ್ಲಿ ನಟ ಸುದೀಪ್ ಅವರು ತಮ್ಮ ಕಿಚ್ಚ 46 ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ರವಿಚಂದ್ರನ್ ಅವರು ಅಮೆರಿಕಾ ಪ್ರವಾಸದಲ್ಲಿದ್ದು, ಮಕ್ಕಳಾದ ಮನೋರಂಜನ್ ಹಾಗು ವಿಕ್ರಮ್ ಪ್ರತಿಭಟನೆಯಲ್ಲಿ ಭಾಗಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಪುತ್ರ ವಿನೀಶ್ ಕಾಲಿಗೆ ಪೆಟ್ಟು ಬಿದ್ದ ಕಾರಣ ಆಸ್ಪತ್ರೆಯಲ್ಲಿ ನಟಿ ಇದ್ದು, ಪ್ರತಿಭಟನೆಯಲ್ಲಿ ಭಾಗಿ ಆಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಉಳಿದಂತೆ ಶಿವಣ್ಣ , ಧ್ರುವ ಸರ್ಜಾ, ನಿಖಿಲ್, ಕೋಮಲ್, ರವಿಶಂಕರ್ ,ಸಾಧು ಕೋಕಿಲ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Karnataka Bandh: ನಾಳೆ ಸಂಜೆ ಚಿತ್ರಮಂದಿರಗಳು ಓಪನ್, ಬೆಳಗ್ಗೆ ಇರಲ್ಲ; ಕಾವೇರಿ ಹೋರಾಟಕ್ಕೆ ಚಿತ್ರರಂಗ ಸಾಥ್!
ಚಿತ್ರರಂಗದ ಪ್ರತಿಭಟನೆಗೆ ಸಜ್ಜಾಗಿದೆ ವೇದಿಕೆ
ಗುರುರಾಜ ಕಲ್ಯಾಣ ಮಂಟಪದ ಬಳಿ ವೇದಿಕೆ ಈಗಾಗಲೇ ಸಿದ್ಧವಾಗಿದ್ದು, ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಸಾಧ್ಯತೆ ಇದೆ. ಫಿಲ್ಮ್ ಚೇಂಬರ್ 400 ಚೇರ್‌ಗಳನ್ನು ವ್ಯವಸ್ಥೆ ಮಾಡಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದಿಂದ ಪ್ರತ್ಯೇಕ ಪ್ರತಿಭಟನೆ ಇದಾಗಿದೆ.
“ಕರ್ನಾಟಕ ಬಂದ್’ಗೆ ರಾಜ್ಯದ ಚಿತ್ರಮಂದಿರಗಳ ಬೆಂಬಲ
ʻʻʻದಿನಾಂಕ 29-9-2023 ಶುಕ್ರವಾರ ನಡೆಯಲಿರುವ ‘ಕರ್ನಾಟಕ ಬಂದ್” ಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ ಸಂಜೆಯವರೆಗೆ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಸಂಜೆಯ ನಂತರ ಪ್ರದರ್ಶನಗಳು ಮಾಮೂಲಿನಂತೆ ಪ್ರದರ್ಶನಗೊಳ್ಳುತ್ತವೆ. “ಕಾವೇರಿ ನಮ್ಮದು” ರಾಜ್ಯದ ಭಾಷೆ, ನೀರು ಮತ್ತು ನೆಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಸರ್ಕಾರ, ರೈತರ ಮತ್ತು ಹೋರಾಟಗಾರರ ಬೆಂಬಲಕ್ಕೆ ಸದಾ ಸಿದ್ಧರಿದ್ದೇವೆ”. ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ವಲಯದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.