ಬೆಂಗಳೂರು: ಈ ಬಾರಿಯ ಪ್ರಸಕ್ತ ಬಜೆಟ್‌ನಲ್ಲಿ ಕೆಲವು ಸಿನಿಮಾಗಳಲ್ಲಿನ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ. ರಾಜಕುಮಾರ್ ಅವರ ʻಬಂಗಾರದ ಮನುಷ್ಯʼ ಸಿನಿಮಾದ ಹಾಡಿನ ಸಾಲುಗಳನ್ನು ಹೇಳುತ್ತ ಬಜೆಟ್ ಮಂಡನೆಯನ್ನು ಶುರು ಮಾಡಿದರು.
ʻಬಂಗಾರದ ಮನುಷ್ಯʼ ಮಾತ್ರವಲ್ಲದೆ ಕಳೆದ ವರ್ಷ ಬಿಡುಗಡೆಯಾದ ಡಾಲಿ ಧನಂಜಯ ನಿರ್ಮಾಣದ ಶಶಾಂಕ್ ಸೋಗಲ್ ನಿರ್ದೇಶನದ ʻಡೇರ್ ಡೆವಿಲ್ ಮುಸ್ತಫಾʼ ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅನುದಾನಗಳನ್ನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು ʻಡೇರ್ ಡೆವಿಲ್ ಮುಸ್ತಫಾʼ ಚಿತ್ರದ ಎರಡು ಸಾಲುಗಳನ್ನು ಸದನದಲ್ಲಿ ಹೇಳಿದ್ದಾರೆ. “ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತಹ ಗಾಳಿ ಬೀಸಲಿ” ಎಂಬ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದಾರೆ.
ನಟ ಡಾಲಿ ಧನಂಜಯ್ ಅವರು ʻಡೇರ್ ಡೆವಿಲ್ ಮುಸ್ತಫಾʼ ಸಿನಿಮಾವನ್ನು ನಿರ್ಮಾಣ ಹಾಗೂ ಪ್ರಸ್ತುತಪಡಿಸಿದ್ದರು. ಅದರ ಜತೆಗೆ ಸಿನಿಮಾದ ಒಂದಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಈ ಸಾಲುಗಳನ್ನು ಕೂಡ ಧನಂಜಯ ಅವರೇ ಬರೆದಿದ್ದರು. ಇನ್ನು ವಿಶೇಷವೆಂದರೆ ಇತ್ತೀಚಿಗಷ್ಟೇ ಡಾಲಿ ಧನಂಜಯ್ ಅವರು ಲಿಡ್ಕರ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸೆಡರ್ ಆಗಿ ಆಯ್ಕೆ ಆಗಿದ್ದರು. ಈ ಬಾರಿಯ ಮುಖ್ಯಮಂತ್ರಿಗಳು ಸೂಟ್‌ಕೇಸ್ ಬಿಟ್ಟು ಲಿಡ್ಕರ್ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ವಿಧಾನಸೌಧ ಪ್ರವೇಶ ಮಾಡಿದರು. ಒಟ್ಟಾರೆ ಈ ಬಾರಿಯ ಬಜೆಟ್‌ನಲ್ಲಿ ನಟ ಡಾಲಿ ಧನಂಜಯ್ ಹಾಗೂ ಅವರ ತಂಡ ಪರೋಕ್ಷವಾಗಿ ಭಾಗಿಯಾದಂತಾಗಿದೆ.