Site icon Vistara News

Karnataka Film Chamber: ಕರ್ನಾಟಕ ಚಲನಚಿತ್ರ ಮಂಡಳಿ ಚುನಾವಣೆ; ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿದ ಶಿಲ್ಪಾ ಶ್ರೀನಿವಾಸ್!

shilpa shrinivas

ಬೆಂಗಳೂರು: ಕನ್ನಡ ಚಿತ್ರರಂಗ ಮಾತೃ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಸೆ. 23ಕ್ಕೆ ಫಿಲ್ಮ್ ಚೇಂಬರ್ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಅಧ್ಯಕ್ಷ ಸ್ಥಾನದಲ್ಲಿ ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಭರದಿಂದ ಪ್ರಚಾರ ನಡೆಸಿರುವ ಶಿಲ್ಪಾ ಶ್ರೀನಿವಾಸ್ ಅವರಿಗೆ ಮಂಡಳಿಗೆ ಅಧ್ಯಕ್ಷರಾದ ಭಾ.ಮಾ.ಹರೀಶ್ ತಂಡ ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಇದೇ 23ರಂದು ಚುನಾವಣೆ ನಡೆಯಲಿದೆ. ಈ ಬಾರಿಯ ಅಧ್ಯಕ್ಷ ಸ್ಥಾನ ವಿತರಕ ವಲಯದ ಪಾಲಾಗಿದ್ದು. ಅಧ್ಯಕ್ಷ ಸ್ಥಾನದ ಮೇಲೆ ವಿ.ಎಚ್ ಸುರೇಶ್, ಎನ್ ಎಮ್ ಸುರೇಶ್ , ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಆಕಾಂಕ್ಷಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚಿದೆ. ಈ ಬಾರಿಯ ಚುನಾವಣೆಯಲ್ಲಿ 1638 ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಅದರಲ್ಲಿ ನಿರ್ಮಾಪಕರ ವಲಯದಿಂದ 1150 ಮತದಾರರು, ವಿತರಕರ ವಲಯದಿಂದ 358 ಮತ್ತು ಪ್ರದರ್ಶಕರು 138 ಮಂದಿ ಮತದಾನ ಮಾಡುವ ಅವಕಾಶ ಪಡೆದಿದ್ದಾರೆ.

ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿದ ಶಿಲ್ಪಾ ಶ್ರೀನಿವಾಸ್! 10 ಲಕ್ಷ ಮೀಸಲು

ವಾಣಿಜ್ಯ ಮಂಡಳಿ ಸದಸ್ಯರ ಕುಟುಂಬ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿರುವ ಶಿಲ್ಪಾ ಶ್ರೀ‌ನಿವಾಸ್, ಅದಕ್ಕಾಗಿ ಹತ್ತು ಲಕ್ಷ ರೂ. ಮೀಸಲಿಟ್ಟಿದ್ದಾರೆ. ʻʻಇಡೀ ಚಿತ್ರೋದ್ಯಮಕ್ಕೆ ಈ ಟ್ರಸ್ಟ್ ಬೆಳಕಾಗಲಿ. ಯಾರೇ ಅಧ್ಯಕ್ಷರು ಬಂದರು ಮುಂದುವರಿಸಿಕೊಂಡು ಹೋಗಲಿ. ತಾವು ಮಂಡಳಿ ಅಧ್ಯಕ್ಷ ಸ್ಥಾನಕ್ಕೇರಿದರೆ ಮೊದಲು ಇದನ್ನು ಜಾರಿಗೆ ತರುತ್ತೇವೆʼʼ ಎಂದರು.

ಇದನ್ನೂ ಓದಿ: Karnataka Film Chamber: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎನ್ ಎಮ್ ಸುರೇಶ್ ನಾಮಪತ್ರ

Karnataka Film Chamber

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಲ್ಪಾ ಶ್ರೀನಿವಾಸ್, ʻʻ1976ರಿಂದ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದೇನೆ. ನಿರ್ಮಾಪಕನಾಗಿ, ವಿತರಕನಾಗಿ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆʼʼ ಎಂದರು.

ಕಳೆದ 40 ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿರುವ ಶಿಲ್ಪಾ ಶ್ರೀನಿವಾಸ್, 600ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ , ಶಂಕರ್ ನಾಗ್ , ಅಂಬರೀಶ್, ಶಿವಣ್ಣ ಜತೆ ಕೆಲಸ ಮಾಡಿರುವ ಅವರು, ಪ್ರಜಾಪ್ರಭುತ್ವ, ಪರ್ವ, ರೋಮಿಯೊ ಜೂಲಿಯೆಟ್, ಉಪೇಂದ್ರ ಹೀಗೆ ಇನ್ನು ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ.

ಅಂದಹಾಗೆ ಈ ಬಾರೆಯ ಚುನಾವಣೆ ವಿಳಂಬವಾಗಿದೆ. ಅಂದುಕೊಂಡಂತೆ ಆಗಿದ್ದರೆ ಮೇ ತಿಂಗಳಲ್ಲೆ ಚುನಾವಣೆ ನಡೆದು ಫಲಿತಾಂಶ ಕೂಡ ಹೊರಬೀಳಬೇಕಿತ್ತು. ಆದರೆ ಈ ಬಾರಿ ಸೆಪ್ಟಂಬರ್‌ನಲ್ಲಿ ನಡೆಯುತ್ತಿದೆ.

ಇನ್ನು ಕಳೆದ ಬಾರಿ 2022ರಲ್ಲಿ ನಡೆದ ಚುನಾವಣೆಯಲ್ಲಿ ಭಾ.ಮ. ಹರೀಶ್​ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅಧಿಕಾರದ ಅವಧಿ 2023ರ ಮೇ 28ಕ್ಕೆ ಅಂತ್ಯವಾಗಿದೆ. ಹಾಗಿದ್ದರೂ ಕೂಡ ಚುನಾವಣೆ ನಡೆಸಿರಲಿಲ್ಲ.

Exit mobile version