Site icon Vistara News

KCC Cup 2023: ಡಿಸೆಂಬರ್‌ನಲ್ಲಿ KCC ಕಪ್‌; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?

KCC Cup for December; Will Sachin Tendulkar, MS Dhoni came

ಬೆಂಗಳೂರು: ಸಿನಿಮಾ ಕೆಲಸಗಳಿಂದ ಕೊಂಚ (KCC Cup 2023 ) ಬ್ರೇಕ್‌ ಪಡೆದುಕೊಂಡು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಪ್ರತಿವರ್ಷ ಒಂದೆಡೆ ಸೇರಿ ನಡೆಸಿಕೊಂಡು ಬರುತ್ತಿರುವ “ಕರ್ನಾಟಕ ಚಲನಚಿತ್ರ ಕಪ್‌’’ (ಕೆಸಿಸಿ) ಕ್ರಿಕೆಟ್‌ ಲೀಗ್‌ನ ನಾಲ್ಕನೇ ಆವೃತ್ತಿ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಪ್ರತಿ ವರ್ಷ ಕೆಸಿಸಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆ. ಅದರಲ್ಲೂ ಕಳೆದೆರಡು ಸೀಸನ್‌ಗಳಂತೂ ಅದ್ಧೂರಿಯಾಗಿ ನಡೆದಿವೆ. ಈ ಬಾರಿಯ ಸ್ಪೆಷಲ್ ಅಂದರೆ ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ ಅವರನ್ನು ಕರೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಎಲ್ಲ ದರ್ಜೆಯ ಕ್ರಿಕೆಟ್‌ ಪಂದ್ಯಗಳಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಸದ್ಯ ಅವರನ್ನು ಕೆಸಿಸಿಯಲ್ಲಿ ಆಡುವುದಕ್ಕೆ ಕರೆಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಹಾಗೆಯೇ, ಕ್ಯಾಪ್ಟನ್ ಕೂಲ್ ಎಂ ಎಸ್‌ ಧೋನಿ ಅವರಿಗೂ ಕೆಸಿಸಿ ಆಯೋಜಕರು ಅಪ್ರೋಚ್ ಮಾಡಿರುವ ಕುರಿತು ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಆಯೋಜಕರಿಂದ ಮಾಹಿತಿ ಲಭ್ಯವಾಗಿಲ್ಲ. ಒಂದುವೇಳೆ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಸಚಿನ್, ಧೋನಿ ಕ್ರಿಕೆಟ್ ಆಡಿದರೆ, ಅಭಿಮಾನಿಗಳಿಗೆ ಇದು ಹಬ್ಬವೇ ಸರಿ.

ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್‌, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. ಇದೀಗ ಈ ಹೊಸ ಸೀಸನ್ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆಯೇ ಎಂಬುದನ್ನು ಕಾದುನೋಡಬೇಕು. ಕಳೆದ ಬಾರಿ ಮೈಸೂರಿನಲ್ಲಿ ಟೂರ್ನಮೆಂಟ್ ಆಯೋಜನೆ ಮಾಡುವುದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊನೇ ಕ್ಷಣದಲ್ಲಿ ಅದು ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಎರಡೂ ದಿನಗಳೂ ಅದ್ದೂರಿಯಾಗಿ ಮ್ಯಾಚ್‌ಗಳು ನಡೆದಿದ್ದವು. ಕ್ರೀಡಾಂಗಣವು ತುಂಬಿ ತುಳುಕುತ್ತಿತ್ತು.

ಇದನ್ನೂ ಓದಿ: KCC 2023 Final: ಕೆಸಿಸಿ ಕ್ರಿಕೆಟ್​; ಗಂಗಾ ವಾರಿಯರ್ಸ್​ ಚಾಂಪಿಯನ್​

ಕೆಸಿಸಿಯಲ್ಲಿ ಹೊಯ್ಸಳ ಈಗಲ್ಸ್, ಕದಂಬ ಲಯನ್ಸ್, ಗಂಗಾ ವಾರಿಯರ್ಸ್, ವಿಜಯನಗರ ಪೇಟ್ರಿಯಟ್ಸ್, ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳು ಇವೆ. ಕಳೆದ ಬಾರಿಗೆ ಟೀಮ್‌ ಮೆಂಟರ್‌ಗಳಾಗಿ ದಿನಕರ್ ತೂಗುದೀಪ, ನಂದಕೀಶೋರ್, ಸದಾಶಿವ ಶಣೈ, ಕಾರ್ತಿಕ್‌ ಗೌಡ, ರಾಕ್‌ಲೈನ್ ವೆಂಕಟೇಶ್, ಶ್ರೀಕಾಂತ್ ಇದ್ದರು. ಶಿವರಾಜ್‌ಕುಮಾರ್, ಉಪೇಂದ್ರ, ಗಣೇಶ್, ಸುದೀಪ್, ಧನಂಜಯ್, ಧ್ರುವ ಸರ್ಜಾ ಅವರು ಫೇಮ್ ಆಫ್ ಟೀಮ್ ಆಗಿ ಕೆಲಸ ಮಾಡಿದ್ದರು. ನಟ ರವಿಚಂದ್ರನ್ ಮತ್ತು ನಟಿ ರಮ್ಯಾ ಅವರು ಕೆಸಿಸಿಯ ಅಂಬಾಸಿಡರ್‌ಗಳಾಗಿ ಕಾಣಿಸಿಕೊಂಡಿದ್ದರು. ಅಂದಹಾಗೆ, ಕಳೆದ ಸೀಸನ್‌ ಅಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡ ಚಾಂಪಿಯನ್ ಆಗಿತ್ತು.

Exit mobile version