Site icon Vistara News

Kerebete Movie: ಹಳ್ಳಿ ಸೊಗಡಿನ ಸಿನಿಮಾ ‘ಕೆರೆಬೇಟೆ’; ಮತ್ತೆ ಹೀರೊ ಆಗಿ ಮಿಂಚಲು ಗೌರಿ ಶಂಕರ್‌ ಸಜ್ಜು

kerebete

kerebete

ಬೆಂಗಳೂರು: ಇತ್ತೀಚಿನ ಕೆಲವು ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ಗೆ(Sandalwood) ಹೊಸಬರ ಆಗಮನವಾಗುತ್ತಿದೆ. ಜತೆಗೆ ವಿಭಿನ್ನ ಸಿನಿಮಾಗಳು ತಯಾರಾಗುತ್ತವೆ. ಹೊಸಬರ ಸಿನಿಮಾವಾದರೂ ಅಭಿಮಾನಿಗಳನ್ನು ರಂಜಿಸುವಲ್ಲಿ ಹಿಂದೆ ಬೀಳುವುದಿಲ್ಲ. ಇದೀಗ ಮತ್ತೊಂದು ಹೊದ ಶೈಲಿಯ ಚಿತ್ರವೊಂದು ರಿಲೀಸ್‌ಗೆ ಸಿದ್ಧವಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರವೇ ‘ಕೆರೆಬೇಟೆ’ (Kerebete). ವಿಭಿನ್ನ ಟೈಟಲ್‌ನಿಂದಲೇ ಇದು ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಇದರಲ್ಲಿ ಗೌರಿ ಶಂಕರ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್ ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೌರಿ ಶಂಕರ್  ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ನಾಯಕನಾಗಿ ಗಮನ ಸೆಳೆದಿದ್ದರು. ʼರಾಜಹಂಸʼ ಸಿನಿಮಾ ತೆರೆಕಂಡು 5 ವರ್ಷಗಳ ಬಳಿಕ ಇದೀಗ ಗೌರಿ ಶಂಕರ್ ʼಕೆರೆಬೇಟೆʼಯಾಡಲು ಹೊರಟಿದ್ದಾರೆ.

ಇದು ರಾಜ್‌ಗುರು ಅವರ ಮೊದಲ ಸಿನಿಮಾ. ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಎ.ಆರ್.ಬಾಬು, ಪವನ್‌ ಒಡೆಯರ್ ಮತ್ತಿತರ ಜನಪ್ರಿಯ ನಿರ್ದೇಶಕರ ಜತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ರಾಜ್ ಗುರು ಅವರಿಗಿದೆ. ಇದೀಗ ʼಕೆರೆಬೇಟೆʼ ಎನ್ನುವ ವಿಭಿನ್ನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಕ್ಟೋಬರ್‌ 27ರಂದು ಮಧ್ಯಾಹ್ನ 12.1ಕ್ಕೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ʼಕೆರೆಬೇಟೆʼ ಬಗ್ಗೆ ಗೊತ್ತೇ?

ʼಕೆರೆಬೇಟೆʼ ಎಂದರೆ ಮಲೆನಾಡ ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡ ಭಾಗದಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ದೊಡ್ಡ ಕೆರೆಗಳಲ್ಲಿ ಇದು ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಮಲೆನಾಡ ಭಾಗದ ಕೆರೆಬೇಟೆಯನ್ನು ಸಿನಿಮಾ ಮೂಲಕ ಕಟ್ಟಿಕೊಡುತ್ತಿದ್ದಾರೆ ರಾಜ್ ಗುರು. ಗೌರಿ ಶಂಕರ್ ಇದಕ್ಕೆ ಸಾಥ್‌ ನೀಡಿದ್ದು, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ʼʼಕೆರೆಬೇಟೆʼ ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು  ಹಳ್ಳಿ ಸೊಗಡಿನ ಕಥೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು ಅ. 27ರಂದು ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ’ʼ ಎಂದು ಗೌರಿ ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: Actress Ramya: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ರಿಲೀಸ್‌ಗೆ ಡೇಟ್‌ ಫಿಕ್ಸ್‌!

ಜೈ ಶಂಕರ್ ಪಟೇಲ್ ಹಾಗೂ ಗೌರಿ ಶಂಕರ್ ತಮ್ಮ ʼಜನಮನʼ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ನಿರತವಾಗಿದೆ. ಈ ನಡುವೆ ಸಿನಿಮಾ ತಂಡ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಹಾಗೂ ಸೊರಬ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version