ಬೆಂಗಳೂರು: ಮುಂಬರುವ ಸ್ಪೈ ಥ್ರಿಲ್ಲರ್ ವಾರ್-2 ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ (Kiara Advani) ಅವರು ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್ಟಿಆರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಕಿಯಾರಾ ಪಾತ್ರದ ಬಗ್ಗೆ ಇನ್ನಷ್ಟೇ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಈ ಚಿತ್ರವನ್ನು ಅಯನ್ ಮುಖರ್ಜಿ ಅವರು ನಿರ್ದೇಶಿಸಲಿದ್ದಾರೆ. ವಾರ್-2 ಯಶ್ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ನ ಒಂದು ಭಾಗವಾಗಿದೆ.
ಮೂಲಗಳ ಪ್ರಕಾರ್ ವಾರ್ -2ವಿನಲ್ಲಿ ಹೃತಿಕ್ ರೋಷನ್, ಜ್ಯೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಆಡ್ವಾಣಿ ಅವರಂತಹ ಮೂವರು ಸೂಪರ್ಸ್ಟಾರ್ಗಳಿದ್ದಾರೆ. ಹೃತಿಕ್ ಇತ್ತೀಚೆಗೆ, IIFA ಅವಾರ್ಡ್ಸ್ ಸಂದರ್ಭದಲ್ಲಿ, ಜ್ಯೂನಿಯರ್ ಎನ್ಟಿಆರ್ ಜತೆಗೆ ಕೆಲಸ ಮಾಡುವ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ವರದಿ ಪ್ರಕಾರ, ಜ್ಯೂನಿಯರ್ ಎನ್ಟಿಆರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಂತಿಮ ಸ್ಕ್ರಿಪ್ಟ್ ಇನ್ನೂ ತಯಾರಾಗಿಲ್ಲ. ವಾರ್ 2ನಲ್ಲಿ ಜ್ಯೂನಿಯರ್ ಎನ್ಟಿಆರ್ ಪಾತ್ರವು ಕೆಲವು ನೆಗೆಟಿವ್ ಶೇಡ್ ಹೊಂದಿರಲಿದೆʼʼ ಎನ್ನಲಾಗಿದೆ. ವಾರ್ 2 ನವೆಂಬರ್ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೃತಿಕ್ ರೋಷನ್ ಒಂದು ತಿಂಗಳ ಬಳಿಕ ಸೆಟ್ಗೆ ಬರಲಿದ್ದಾರೆ ಎನ್ನಲಾಗಿದೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಜ್ಯೂನಿಯರ್ ಎನ್ಟಿಆರ್ ಇತ್ತೀಚಿನ ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾಗಾಗಿ 45 ಕೋಟಿ ರೂ. ಪಡೆದಿದ್ದರು. ವಾರ್ 2 ಸಿನಿಮಾಗಾಗಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Monsoon Food: ನಾಲಿಗೆಯ ಚುಟುಚುಟು ನಿವಾರಿಸುವ ಉತ್ತರ ಕರ್ನಾಟಕದ ಮಳೆಗಾಲದ ಖಾದ್ಯಗಳು!
ಸಿದ್ಧಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. 2019ರ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ.
ಜ್ಯೂನಿಯರ್ ಎನ್ಟಿಆರ್ ಅವರು ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್ಸ್ಟಾರ್ಗಳನ್ನು ಹೊಂದಿದೆ.