Site icon Vistara News

Kiccha Sudeep: ಹಿರಿಯ ನಟ ಎನ್ನಬೇಡಿ ಎಂದ ಕಿಚ್ಚ; ಡಾರ್ಲಿಂಗ್ ಕೃಷ್ಣಗೆ ಹಾಕಿದ ಸವಾಲ್‌ ಏನು?

Kiccha Sudeep Milana Nagaraj Darling Krishna shashank

ಬೆಂಗಳೂರು: ಶಶಾಂಕ್ (Shashank) ನಿರ್ದೇಶಿಸಿ, ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ( kousalya supraja rama) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್ (Kiccha Sudeep) ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆ ಏರಿದ ಎಲ್ಲರೂ ಸುದೀಪ್​​ಗೆ ಹಿರಿಯ ನಟ ಎಂದು ಹೇಳಿದರು. ಹೇಳುತ್ತಿದ್ದಂತೆ ಸುದೀಪ್‌ ತಮಾಷೆಯಾಗಿಯೇ ʻʻವೇದಿಕೆ ಏರಿದ ಎಲ್ಲರೂ ನನಗೆ ಹಿರಿಯ ನಟ ಎಂದರು. ನಾನಿನ್ನೂ ಲವ್​ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ದಯವಿಟ್ಟು ಹಿರಿಯ ನಟ ಎನ್ನಬೇಡಿ’ ಎಂದು ಸಹನಟರ ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೇ ʻʻಸಿನಿಮಾದಲ್ಲಿನ ಡೈಲಾಗ್‌ ಮನೆಯಲ್ಲಿ ಹೊಡೆಯಲಿ ನೋಡೋಣ” ಎಂದು ಡಾರ್ಲಿಂಗ್ ಕೃಷ್ಣ ಅವರಿಗೆ ತಮಾಷೆಯಾಗಿ ಸವಾಲ್‌ ಹಾಕಿದ್ದಾರೆ.

ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಬಗ್ಗೆ ಮಾತನಾಡಿ ʻʻಒಂದು ಸಿನಿಮಾ ಚೆನ್ನಾಗಿ ಹೋಗುತ್ತದೆ, ಒಂದು ಸಿನಿಮಾ ಚೆನ್ನಾಗಿ ಹೋಗದೆ ಇರಬಹುದು ಆದರೆ ಶಶಾಂಕ್ ಅವರು ಕೆಟ್ಟ ಸಿನಿಮಾ ಅಂತೂ ಮಾಡಲು ಸಾಧ್ಯವೇ ಇಲ್ಲ. ಆ ವ್ಯಕ್ತಿಯ ಮೇಲೆ ನನಗೆ ಅಷ್ಟು ನಂಬಿಕೆ ಇದೆ. ಬಚ್ಚನ್ ಸಿನಿಮಾ ಮಾಡುವಾಗ ಸತತವಾಗಿ ಒಂದೂವರೆ ವರ್ಷಗಳ ಕಾಲ ನನ್ನ ಹಿಂದೆ ಅವರು ಸುತ್ತಿದ್ದರು. ಅವರು ನಂಬಿದ್ದ ಕತೆಯನ್ನು ನನಗೆ ಒಪ್ಪಿಸಿ ಸಿನಿಮಾ ಮಾಡಿದರುʼʼಎಂದರು.

ಇದನ್ನೂ ಓದಿ: Kiccha Sudeep: ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ: ’ಕೋಟಿಗೊಬ್ಬ’ನ ಹೃದಯವಂತಿಕೆಗೆ ಫ್ಯಾನ್ಸ್‌ ಸಲಾಂ!

ಪುರುಷ ಅಹಂಕಾರದ ಕುರಿತಾದ ಕತೆ ಹೊಂದಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೈಲರ್​ನಲ್ಲಿ ನಟ ಡಾರ್ಲಿಂಗ್ ಕೃಷ್ಣ, ಮಹಿಳೆಯರನ್ನು ಕಾಲ ಬಳಿ ಇರಿಸಿಕೊಳ್ಳಬೇಕು ಎಂದು ಹೊಡೆದ ಡೈಲಾಗ್ ಕುರಿತಾಗಿ ತಮಾಷೆಯಾಗಿ ಮಾತನಾಡಿದ ಸುದೀಪ್, ”ಡಾರ್ಲಿಂಗ್ ಕೃಷ್ಣ ಹೀಗೆ ಡೈಲಾಗ್ ಹೊಡೆದಿದ್ದಾರೆ, ಆದರೆ ಅದೇ ಡೈಲಾಗ್ ಅನ್ನು ಮನೆಯಲ್ಲಿ ಹೊಡೆಯಲಿ ನೋಡೋಣ” ಎಂದು ಎದುರಿಗೇ ಇದ್ದ ಕೃಷ್ಣರ ಪತ್ನಿ ಮಿಲನಾ ಮುಂದೆ ತಮಾಷೆ ಮಾಡಿದರು.

ಈ ಸಿನಿಮಾವನ್ನು ಬಿ.ಸಿ. ಪಾಟೀಲ್‌ ಹಾಗೂ ಶಶಾಂಕ್‌ ಇಬ್ಬರೂ ಸೇರಿ ನಿರ್ಮಾಣ ಮಾಡಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕೌರವ ಪ್ರೊಡಕ್ಷನ್‌ ಹಾಗೂ ಶಶಾಂಕ್‌ ಸಿನಿಮಾಸ್‌ ಜಂಟಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದು, ʻಲವ್‌ 360ʼ ಸಿನಿಮಾ ಮೂಲಕ ಸಿನಿಮಾ ಮಾಡಿ ಗೆದ್ದಿರುವ ಶಶಾಂಕ್‌ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

Exit mobile version