ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಮ್ ಎನ್ ಕುಮಾರ್ ಜಟಾಪಟಿ ದಿನೇದಿನೆ ಮುಂದುವರಿಯುತ್ತಲೇ ಇದೆ. ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕಿಚ್ಚ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ್ದಾರೆ. ಕೆಲ ನಿರ್ಮಾಪಕರ ಆರೋಪಗಳ ಬೆನ್ನಲ್ಲೇ ನ್ಯಾಯಾಲಯದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದರು ಸುದೀಪ್. ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಕೇಸ್ ಹೂಡಿದ್ದಾರೆ. ಕುಮಾರ್ ಹಾಗೂ ರೆಹಮಾನ್ ವಿರುದ್ಧ ಫಿಲ್ಮ್ಸ್ ಚೇಂಬರ್‌ಗೆ ಸುದೀಪ್ ಈಗಾಗಲೇ ಪತ್ರ ಬರೆದಿದ್ದರು. ಈ ಬಗ್ಗೆ ನಟ ಕಿಚ್ಚ ಸುದೀಪ್ ಅವರೇ ಮಾತನಾಡಿದ್ದಾರೆ.
ಈ ಹಿಂದೆ ಕುಮಾರ್ ಅವರಿಗೆ ಸುದೀಪ್ ಲೀಗಲ್ ನೋಟಿಸ್ ನೀಡಿದ್ದರು. ಹತ್ತು ದಿನಗಳ ಗಡುವು ಕೂಡ ನೀಡಿದ್ದರು. ಕುಮಾರ್ ಬಹಿರಂಗ ಕ್ಷಮೆ ಕೇಳದೇ ಇದ್ದರೆ, ಕ್ರಿಮಿನಲ್ ಮಾನನಷ್ಟ ಹಾಕುವುದಾಗಿಯೂ ನೋಟಿಸ್‌ನಲ್ಲಿ ತಿಳಿಸಿದ್ದರು. ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಕಾನೂನು ಹೋರಾಟ ನಡೆಸಲು ಸುದೀಪ್ ಮುಂದಾಗಿದ್ದಾರೆ.
ನಾನು ಸಂಪಾದನೆ ಮಾಡಿರುವ ಹೆಸರು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ!
ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ ʻʻಯಾರು ಏನೇ ಆರೋಪ ಮಾಡಿದ್ದರೂ ಕೋರ್ಟ್‌ನಿಂದ ಸರಿಯಾದ ಉತ್ತರ ಸಿಗುತ್ತದೆ. ಒಂದು ವಿಚಾರ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ದೇವರು ಒಳ್ಳೆಯದು ಮಾಡಲಿ. ಅದಂತೂ ಸತ್ಯ. ಯಾವುದೇ ಸುಳ್ಳಿರಲಿ, ಸತ್ಯ ಇರಲಿ ಬಹಿರಂಗವಾಗಿ ಹೊರಗೆ ಹೋಗಲೇಬೆಕು. ಸರಿಯಾದ ಮಾರ್ಗದಲ್ಲಿ ನಾನು ಹೋಗುತ್ತಿದ್ದೇನೆ ಎಂದು ನಾನು ಅಂದುಕೊಂಡಿದ್ದೇನೆ. ನಾನು ಕಲಾವಿದ ಆದ ಮೇಲೆ ಎಲ್ಲರಿಗೂ ಸಹಾಯ ಮಾಡುತ್ತೇನೆ ಎಂದು ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಎಂದು ಹೇಗೆ ಬೇಕು ಹಾಗೆ ಮಾತನಾಡಬಾರದು. ನಾನು ಸರಿಯಾಗೆ ನಡೆದುಕೊಂಡು ಬಂದಿದ್ದೇನೆ. ಎಲ್ಲರ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ಎಲ್ಲಿ ಇತ್ಯರ್ಥ ಆಗ್ಬೇಕು ಅಲ್ಲಿ ಇತ್ಯರ್ಥ ಆಗುತ್ತೆ. ಅದಕ್ಕೆ ನಾನು ಕೋರ್ಟ್‌ನಿಂದ ಬಂದೆ. ಜಾಕ್ ಮಂಜು ಏನ್ ಉತ್ತರ ಕೊಡಬೇಕಿತ್ತು ಕೊಟ್ಟಿದ್ದಾರೆ. ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದರೆ ಅವರಿಗೂ ನನಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾನು ಸಂಪಾದನೆ ಮಾಡಿರುವ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲʼʼಎಂದರು.
ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಷಡ್ಯಂತ್ರದ ಹಿಂದಿರೋ ವ್ಯಕ್ತಿ ಸೂರಪ್ಪ ಬಾಬು; ಹೊಸ ಬಾಂಬ್ ಸಿಡಿಸಿದ ವೀರಕಪುತ್ರ ಶ್ರೀನಿವಾಸ!
ಖುದ್ದಾಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿದ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರಾದ ಎನ್ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರೆಹಮಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ನಿರೂಪಿಸಲು ಕೆಲ ಸಾಕ್ಷ್ಯಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ವಕೀಲ ಅಜಯ್ ಕಡಕೋಳ್ ಮೂಲಕ ಎನ್ಎಂ ಕುಮಾರ್, ಎಂಎನ್ ಸುರೇಶ್ ಅವರುಗಳ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುದೀಪ್ ದಾಖಲಿಸಿದ್ದಾರೆ. ಸುದೀಪ್ ಅವರ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಸುದೀಪ್ ಅವರು ತಮ್ಮಿಂದ ಹಣ ಪಡೆದು, ವಂಚಿಸಿದ್ದಾರೆ ಎಂದು ಕುಮಾರ್ ಈ ಹಿಂದೆ ಆರೋಪ ಮಾಡಿದ್ದರು. ಕಾಲ್ ಶೀಟ್ ಕೊಡದೇ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಸುದೀಪ್ ಮೇಲೆ ಆರೋಪ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮಾತಿನ ಹಿನ್ನೆಲೆಯಾಗಿ ಸುದೀಪ್ ಕಾನೂನು ಮೊರೆ ಹೋಗಿದ್ದಾರೆ.