Site icon Vistara News

Kichcha Sudeep: ಕಿಚ್ಚನಿಗೆ ತೃಪ್ತಿ ಕೊಡದ ಸಂಧಾನ ಸಭೆ; ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ನೀಡಿದ ಸುದೀಪ್‌!

Kichcha Sudeep MN Kumar

ಬೆಂಗಳೂರು: ಕಿಚ್ಚ ಸುದೀಪ್​ (Kichcha Sudeep) ಹಾಗೂ ನಿರ್ಮಾಪಕ ಎಮ್‌ ಎನ್‌ ಕುಮಾರ್‌ ಜಟಾಪಟಿ ಮುಂದುವರಿಯುತ್ತಲೇ ಇದೆ. ಇದೀಗ ಕಿಚ್ಚ ಆಗಸ್ಟ್‌ 10ರಂದು ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಎಮ್‌ ಎನ್‌. ಕುಮಾರ್ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸುದೀಪ್​ ಹೇಳಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ರವಿಚಂದ್ರನ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಸಂಧಾನ ಸಭೆ ಕಿಚ್ಚನಿಗೆ ತೃಪ್ತಿ ತಂದಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಸುದೀಪ್.

ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಮ್‌ ಎನ್‌ ಕುಮಾರ್‌ ನಡುವೆ ಆದ ​ವಿವಾದವನ್ನು ಬಗೆಹರಿಸಲು ಸಂಧಾನ ಸಭೆ ನಡೆದಿತ್ತು. ಹಿರಿಯ ನಟರಾದ ಶಿವರಾಜ್​ಕುಮಾರ್​, ರವಿಚಂದ್ರನ್​ ಮುಂತಾದವರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಕಿಚ್ಚ ಸುದೀಪ್​ ಒಪ್ಪಿಕೊಂಡಿರಲಿಲ್ಲ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಸುದೀಪ್​ ಅವರು ಹಾಜರಾಗಿದ್ದಾರೆ. ಕಟಕಟೆಯಲ್ಲಿ ನಿಂತು ಅವರು ತಮ್ಮ ಹೇಳಿಕೆ ನೀಡಿದ್ದಾರೆ. ಸಂಧಾನ ಸಭೆ ಬದಲು ನ್ಯಾಯಾಲಯದ ಮೂಲಕವೇ ಇತ್ಯರ್ಥ ಮಾಡಿಕೊಳ್ಳಲು ಅವರು ಮುಂದಾಗಿದ್ದಾರೆ.

ವಕೀಲ ಅಜಯ್ ಕಡಕೋಳ್ ಜತೆ ಸುದೀಪ್​ ಅವರು ಕೋರ್ಟ್​ಗೆ ಹಾಜರಾದರು. ಅವರೊಂದಿಗೆ ಚಕ್ರವರ್ತಿ ಚಂದ್ರಚೂಡ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಇದ್ದರು. ಕಿಚ್ಚ ಸುದೀಪ್‌ ಫೋಟೊ ಸಹಿತ ಹಲವು ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kichcha Sudeepa: ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿ ಮಹಿಳಾ ಅಭಿಮಾನಿಯ ಹುಚ್ಚು ಪ್ರೀತಿ; ಕಿಚ್ಚ ಹೇಳಿದ್ದೇನು?

ಸುದೀಪ್‌ ಕೋರ್ಟ್‌ನಲ್ಲಿ ಹೇಳಿದ್ದೇನು?

‘ಆರ್‌.ಆರ್. ನಗರದಲ್ಲಿ ಮನೆ ಕಟ್ಟಲು ಹಣದ ನೆರವು ಪಡೆದಿರುವ ಬಗ್ಗೆ ಮಾಡಲಾಗಿರುವ ಆರೋಪ ಸುಳ್ಳು. ಎಮ್‌.ಎನ್‌. ಕುಮಾರ್ ಹೇಳಿಕೆಯನ್ನು ಎಮ್‌.ಎನ್. ಸುರೇಶ್ ಬೆಂಬಲಿಸಿದ್ದಾರೆ. ಇಬ್ಬರು ನಿರ್ಮಾಪಕರ ಸುದ್ದಿಗೋಷ್ಠಿಯಿಂದ ನನಗೆ ಮಾನಹಾನಿ ಆಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ’ ಎಂದು ಸುದೀಪ್ ಹೇಳಿದ್ದಾರೆ.

ರಾಜಿ ಸಂಧಾನ ಮಾಡಿಕೊಳ್ಳುತ್ತಾರಾ ಸುದೀಪ್‌?

ನ್ಯಾಯಾಧೀಶರ ಈ ಪ್ರಶ್ನೆಗೆ ಕಿಚ್ಚ ಒಪ್ಪಿಕೊಂಡಿಲ್ಲ. ‘ಈ ಮೊದಲು ನೋಟಿಸ್ ನೀಡಿ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಲು ಕೇಳಿದ್ದೆ. ಆದರೆ ಅವರು ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸಿಲ್ಲ. ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ನನ್ನ ವರ್ಷಸ್ಸಿಗೆ ಹಾನಿಯಾಗಿದೆʼ ಎಂದು ಸುದೀಪ್​ ಹೇಳಿದ್ದಾರೆ.

ಏನಿದು ವಿವಾದ?

ʻʻಕಿಚ್ಚ ಸುದೀಪ್‌ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್‌ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್‌ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್‌ ನೀಡಿದ್ದರು ಕಿಚ್ಚ.

ಸುದೀಪ್ ಅವರು ಸಿನಿಮಾ ಮಾಡಿಕೊಡುತ್ತೇನೆ ಎಂದು ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಅದನ್ನು ಮರಳಿಸಿಲ್ಲ ಅಲ್ಲದೆ ಸಿನಿಮಾಕ್ಕೆ ಡೇಟ್ಸ್ ಸಹ ನೀಡುತ್ತಿಲ್ಲ ಎಂದು ಕುಮಾರ್ ಆರೋಪ ಮಾಡಿದ್ದರು. ಇದು ಮಾತ್ರವೇ ಅಲ್ಲದೆ ನಾನು ನಿರ್ಮಿಸಬೇಕಿದ್ದ ಸಿನಿಮಾ ಸಹ ತಪ್ಪಿಸಿದ್ದಾರೆ ಎಂದು ಸಹ ಕುಮಾರ್ ಆರೋಪ ಮಾಡಿದ್ದರು.

ಇದಕ್ಕೆ ನ್ಯಾಯಾಲಯ ಮೊರೆ ಹೋದ ಸುದೀಪ್, ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ನೊಟೀಸ್ ಬಂದ ಬಳಿಕ ಕುಮಾರ್ ಅವರು ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಫಿಲ್ಮ್ಸ್‌ ಚೇಂಬರ್ ಎದುರು ಧರಣಿ ಕೂತರು. ಕೊನೆಗೆ ರವಿಚಂದ್ರನ್ ಅವರು ತಾವು ಸಂಧಾನ ಸಭೆ ನಡೆಸುವುದಾಗಿ ಒಪ್ಪಿಕೊಂಡ ಬಳಿಕ ಧರಣಿ ನಿಲ್ಲಿಸಿ ರವಿಚಂದ್ರನ್ ಅನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

Exit mobile version