Site icon Vistara News

Dr Vishnuvardhan: ವಿಷ್ಣು ಸ್ಮಾರಕ ವಿವಾದ; ಹೋರಾಟಕ್ಕೆ ಕಿಚ್ಚನ ಬೆಂಬಲ!

Kichcha Sudeep with Vishnuvardhan

ಬೆಂಗಳೂರು: ಮೇರು ನಟ ಡಾ. ವಿಷ್ಣುವರ್ಧನ್‌ ​ (Vishnuvardhan) ಅವರ ಸ್ಮಾರಕ ಹಾಗೂ ಪುಣ್ಯಭೂಮಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಗೊಂದಲಗಳು ಇತ್ತು. ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 14 ವರ್ಷಗಳು ಕಳೆದಿವೆ. ಡಾ. ವಿಷ್ಣುವರ್ಧನ್​ ಅವರ ಅಂತ್ಯ ಸಂಸ್ಕಾರವಾದ ಅಭಿಮಾನ್‌ ಸ್ಟುಡಿಯೋ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಪುಣ್ಯಸ್ಮರಣೆಯನ್ನು ಆಚರಿಸಲು ಹಲವಾರು ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದು, ಈ ಸಂಬಂಧವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇಂದು (ಡಿ.17) ವಿಷ್ಣುವರ್ಧನ್​ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್​ (Kichcha Sudeep) ಅವರು ಬೆಂಬಲ ಸೂಚಿಸಿದ್ದಾರೆ.

ಹೋರಾಟಕ್ಕೆ ನನ್ನ ಬೆಂಬಲವಿದೆ

ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಟ್ವೀಟ್‌ ಹಂಚಿಕೊಂಡಿದ್ದಾರೆ. ʻʻಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆʼʼಎಂದು ಬರೆದುಕೊಂಡಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ಬೃಹತ್‌ ಪ್ರತಿಭಟನೆ

ಇಂದು (ಡಿ.17) ಡಾ. ವಿಷ್ಣುವರ್ಧನ್‌ ಅಭಿಮಾನಿ ಸಂಘಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಮಾಡಲಾಗುತ್ತಿದೆ. ಫ್ರೀಡಂ ಪಾರ್ಕ್​ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಕನ್ನಡಪರ ಸಂಘಟನೆಗಳು, ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿಷ್ಣುವರ್ಧನ್‌ ಅವರ ಒಡನಾಡಿಗಳೆಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ. ‘ಯಜಮಾನ’ನ ಪುಣ್ಯಭೂಮಿ ನಮ್ಮ ಹಕ್ಕು ಎಂಬ ಅಭಿಯಾನ ಕೂಡ ಶುರುವಾಗಿದೆ.

ಇದನ್ನೂ ಓದಿ: Chhattisgarh CM: ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ ಸಾಯಿ ಅಧಿಕಾರ ಸ್ವೀಕಾರ

ಪ್ರತಿಭಟನೆ ಯಾಕೆ?

ಡಾ. ವಿಷ್ಣುವರ್ಧನ್​ ಅವರ ಅಂತ್ಯ ಸಂಸ್ಕಾರವಾದ ಅಭಿಮಾನ್‌ ಸ್ಟುಡಿಯೋ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಅಭಿಮಾನ್‌ ಸ್ಟುಡಿಯೋದ ಮಾಲೀಕರಿಂದ ಈ ರೀತಿ ಆಗುತ್ತಿದೆ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಆಚರಿಸಲು ಹಲವಾರು ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದು, ಈ ಸಂಬಂಧವಾಗಿ ಪ್ರತಿಭಟನೆ ಮಾಡಲಾಗುತ್ತಿದೆ.

ವಾಸ್ತವದಲ್ಲಿ ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್‌ ಸ್ಟುಡಿಯೋ. ಕನ್ನಡಿಗರು ಚಿತ್ರರಂಗದ ಕೆಲಸಗಳಿಗೆ ಮದ್ರಾಸ್‌ಗೆ ಹೋಗುವುದನ್ನು ತಪ್ಪಿಸಬೇಕು ಎಂದು ಕನಸು ಹೊತ್ತು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್‌ ಸ್ಟುಡಿಯೋ ನಿರ್ಮಿಸಿದ್ದರು. ಆದರೆ ಅವರ ಅಗಲಿಕೆಯ ನಂತರ 2004ರಲ್ಲಿ ಅವರ ಮಕ್ಕಳು ಅದರಲ್ಲಿ ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ, ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣದಿಂದ ಹಿಂದಿನ ಜಿಲ್ಲಾಧಿಕಾರಿ ಶಂಕರ್‌ ಅವರು ಅಭಿಮಾನ್‌ ಸ್ಟುಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು. ಆಗ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದ್ದರು ಎಂದು ವಿಷ್ಣುವರ್ಧನ ಅಭಿಮಾನಿ ಸಂಘಗಳ ಒಕ್ಕೂಟ ಈ ಹಿಂದೆ ಹೇಳಿತ್ತು.

ಈ ನಡುವೆ, ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವು ಮೈಸೂರಿಗೆ ಸ್ಥಳಾಂತರಗೊಂಡಿತು. ಆದರೆ ಅಭಿಮಾನಿಗಳು ಸ್ಮಾರಕ ಎಲ್ಲೇ ಆದರೂ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಹಠವಿಡಿದು, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಅದ್ಧೂರಿಯಾಗಿ ಅಭಿಮಾನ್‌ ಸ್ಟುಡಿಯೋದ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ.

ಆದರೆ, ಈಗ ಅಭಿಮಾನ್‌ ಸ್ಟುಡಿಯೋದ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜತೆಗೆ, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ. ಈ ಕುರಿತಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರನ್ನು ಭೇಟಿಮಾಡಿ ಅಹವಾಲನ್ನು ಸಲ್ಲಿಸಲಾಗಿತ್ತು. ಒಬ್ಬ ನಟನಿಗೇ ಎರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ಮತ್ತು ಪುಣ್ಯಭೂಮಿ ಅಭಿವೃದ್ಧಿಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುವುದಾಗಿ ತಿಳಿಸಿರುತ್ತೇವೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದರು.

Exit mobile version