ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (C M Basavaraj Bommai) ಅವರ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಪ್ರಚಾರ ಮಾಡಿದ ಬಳಿಕ ಕಿಚ್ಚ ಸುದೀಪ್ (Kichcha Sudeepa) ಮತ್ತೆ ಸಿನಿಮಾ ಕಡೆ ಗಮನ ಹರಿಸಿದ್ದಾರೆ. ಇದೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದ ತಮ್ಮ ಮೂರು ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಮೇ 22ರಂದು ಮೊದಲ ಸಿನಿಮಾದ ಪ್ರೊಮೊ ಚಿತ್ರೀಕರಣ ಹಾಗೂ ಜೂನ್ 1ರಂದು ಆ ಸಿನಿಮಾವನ್ನು ಲಾಂಚ್ ಮಾಡುವುದಾಗಿ ಬರೆದುಕೊಂಡಿದ್ದಾರೆ.
ಸುದೀಪ್ ಟ್ವೀಟ್ ಮಾಡಿದ್ದೇನು?
ʻʻನಾನು ಪ್ರಾರಂಭಿಸುತ್ತಿರುವ ಮೂರು ಚಿತ್ರಗಳಲ್ಲಿ ಒಂದರ ಪ್ರೋಮೊ ಶೂಟ್ ಮೇ 22ರಂದು ನಡೆಯಲಿದೆ ಎಂದು ಘೋಷಿಸಲು ಸಂತೋಷವಾಗಿದೆ. ಜೂನ್ 1ರಂದು ಲಾಂಚ್ ಆಗಲಿದೆ. ಒಂದು ಪ್ರಕಾರದ ಸ್ಕ್ರಿಪ್ಟ್ ನನ್ನನ್ನು ರೋಮಾಂಚನಗೊಳಿಸಿತು. ಇದು ನಾನು ಎದುರು ನೋಡುತ್ತಿರುವ ಚಿತ್ರʼʼಎಂದು ಬರೆದುಕೊಂಡಿದ್ದಾರೆ.
ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾದ ಪ್ರೋಮೊ ಮೇ 22ರಿಂದ ಶುರುವಾಗಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Kichcha Sudeepa: ʻಕಿಚ್ಚ 46ʼ ಟ್ರೆಂಡ್, ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ನಟ ಸುದೀಪ್! 3 ಸಿನಿಮಾಕ್ಕೆ ಸಿದ್ಧತೆ
ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ
ಈಗಾಗಲೇ ಮೂರು ಸಿನಿಮಾಗಳ ಕೆಲಸ ಆಗುತ್ತಿದೆ ಎಂದು ಕಿಚ್ಚ ಸುದೀಪ್ ಸ್ಪಷ್ಟನೆ ನೀಡುತ್ತಿದ್ದಂತೆ ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಸುದೀಪ್ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ. ಸುದೀಪ್ ಜತೆ ಹೊಂಬಾಳೆ ಫಿಲ್ಮ್ಸ್ ಮೊದಲ ಸಲ ಕೈ ಜೋಡಿಸಲಿದೆ ಎಂದೇ ಹೇಳಲಾಗುತ್ತಿದೆ. ಈ ವಿಚಾರ ಅಭಿಮಾನಿ ವಲಯದಲ್ಲಿಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಚಿತ್ರೋದ್ಯಮವನ್ನು ಬೇರೆ ಹಂತಕ್ಕೆ ಕೊಂಡೊಯ್ದಿರುವ ಹೊಂಬಾಳೆ ಫಿಲ್ಮ್ಸ್ ಕಿಚ್ಚನ 46ನೇ ಚಿತ್ರವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದೆಯಂತೆ. ಅಷ್ಟೇ ಅಲ್ಲ ತೆರೆಮರೆಯಲ್ಲಿ ಕೆಲಸಗಳೂ ಆರಂಭವಾಗಿವೆಯಂತೆ. ತಮಿಳಿನಲ್ಲಿ ಈ ಹಿಂದೆ ರಿಲೀಸ್ ಆಗಿದ್ದ ‘ಸೂರರೈ ಪೊಟ್ರು’ ಚಿತ್ರ ನಿರ್ದೇಶನ ಮಾಡಿದ್ದ ಸುಧಾ ಕೊಂಗಾರ, ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.