Site icon Vistara News

Koffee With Karan | ಮಾಜಿ ಪತಿ ಬಗ್ಗೆ ಸಮಂತಾ ವ್ಯಂಗ್ಯ: ಹೊಸ ವ್ಯಕ್ತಿಯಾಗಿದ್ದೇನೆಂದ ನಾಗ ಚೈತನ್ಯ

Koffee With Karan

ಬೆಂಗಳೂರು: ನಟಿ ಸಮಂತಾ ವಿಚ್ಛೇದನ ಪಡೆದು ಒಂದು ವರ್ಷ ಆಗುತ್ತಿದೆ. ಈ ವಿಚಾರವಾಗಿ ಅವರು ಎಲ್ಲಿಯೂ ಮಾತನಾಡಿರಲಿಲ್ಲ. ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ರುತ್‌ ಪ್ರಭು ವಿಚ್ಛೇದನ ಪಡೆದಿದ್ದು ಏಕೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇಬ್ಬರೂ ಮೌನವಾಗಿದ್ದರು. ಆದರೆ, ಈಗ ಆ ಬಗ್ಗೆ ನಿಖರ ಕಾರಣವನ್ನು ಸಮಂತಾ ಹೇಳದಿದ್ದರೂ, ನಾಗ ಚೈತನ್ಯ ಬಗ್ಗೆ ಇರುವ ಅಸಮಾಧಾನದ ತೀವ್ರತೆಯನ್ನು ರಿಯಾಲಿಟಿ ಶೋ (Koffee With Karan) ಒಂದರಲ್ಲಿ ಹೊರಹಾಕಿದ್ದಾರೆ.

ʻಕಾಫಿ ವಿದ್‌ ಕರಣ್ ಸೀಸನ್‌-7ʼ (Koffee With Karan) ನಲ್ಲಿ ಸಮಂತಾ ಪ್ರಭು ತಾವು ಎದುರಿಸಿದ ಸವಾಲುಗಳ ಕುರಿತ ಹಂಚಿಕೊಂಡಿದ್ದಾರೆ. ಈ ಶೋ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರೊಂದಿಗೆ ಅತಿಥಿಯಾಗಿ ಸಮಂತಾ ಭಾಗವಹಿಸಿದ್ದರು. ನಿರೂಪಕ ಕರಣ್‌ ಜೋಹರ್‌ ಕೇಳಿದ ಹಲವು ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದ್ದಾರೆ.

ಇದನ್ನೂ ಓದಿ | Samantha Ruth Prabhu: ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಸಮಂತಾ ಹೇಳಿದ್ದು ಯಾಕೆ?

ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದು ದೂರವಾದ ಬಳಿಕ ಪರಿಸ್ಥಿತಿ ಹೇಗಿತ್ತು ಎಂಬ ಪ್ರಶ್ನೆ ಕೇಳುತ್ತಿದ್ದಂತೆ, ʻಮಾಜಿ ಪತಿʼ ಎಂದು ಹೇಳಿ ಎಂದು ಮಾತು ಶುರು ಮಾಡುತ್ತಾರೆ ಸಮಂತಾ. ʻಕೆಲ ಕಾಲ ತುಂಬ ಕಷ್ಟಕರವಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೇನೆʼ ಎಂದು ತಿಳಿಸಿದ್ದಾರೆ.

ವಿಚ್ಛೇದನ ಪಡೆದು ಒಂದು ವರ್ಷ ಆಗುತ್ತಾ ಬಂದಿದ್ದೂ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೋ ವೇಳೆ, ನಾಗ ಚೈತನ್ಯ ಅವರ ಮೇಲೆ ಕಠಿಣ ಭಾವನೆಗಳಿವೆಯೇ ಎಂದು ಸಮಂತಾ ಬಳಿ ಕರಣ್ ಕೇಳಿದಾಗ, “ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ, ನೀವು ಚೂಪಾದ ವಸ್ತುಗಳನ್ನು ಮರೆಮಾಚಬೇಕಾಗುವುದುʼʼ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಅಂದರೆ, ಚಾಕುಗಳಂತಹ ಹರಿತವಾದ ಯಾವುದೇ ವಸ್ತುಗಳನ್ನು ಇಡಬೇಡಿ ಎಂಬ ಲೆಕ್ಕದಲ್ಲಿ ತಮ್ಮಿಬ್ಬರ ಅಸಮಾಧಾನದ ಹೊಗೆಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಮಾತನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ಕಾಲ ಕೂಡಿಬಂದರೆ ನಾಗ ಚೈತನ್ಯ ಜತೆ ನಟಿಸುವುದಾಗಿಯೂ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಜನರು ಸಾಕಷ್ಟು ಟ್ರೋಲ್‌ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಸಮಂತಾ, ʻನಾನು ಈ ಮಾರ್ಗವನ್ನು ಆರಿಸಿಕೊಂಡಿದ್ದು ನನಗೆ ಖುಷಿ ಇದೆ. ಅದರ ಬಗ್ಗೆ ಅಸಮಾಧಾನವಿಲ್ಲ. ನನ್ನ ಜೀವನದಲ್ಲಿ ನಡೆದ ಘಟನೆಗಳಿಗೆ ಉತ್ತರಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿತ್ತುʼ ಎಂದು ಹೇಳಿಕೊಂಡಿದ್ದಾರೆ.

ಸಮಂತಾ ಅವರು ಹಾಲಿ ತೆಲುಗಿನ ʻಖುಷಿʼ, ʻಯಶೋದಾʼ, ʻಶಾಕುಂತಲಂʼ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್‌ ನಿರ್ದೇಶಕ ಫಿಲಿಪ್‌ ಜಾನ್‌ ಅವರ ಜತೆ ʻಅರೆಂಜ್‌ಮೆಂಟ್ಸ್‌ ಆಫ್‌ ಲವ್‌ʼ ಸಿನಿಮಾದಲ್ಲಿ ಸಮಂತಾ ಬಣ್ಣ ಹಚ್ಚಲಿದ್ದಾರೆ.

ಸಾಕಷ್ಟು ಬದಲಾಗಿದ್ದೇನೆ ಎಂದ ನಾಗ ಚೈತನ್ಯ

ನಾಗ ಚೈತನ್ಯ ಅವರು ಅಕ್ಟೋಬರ್ 2, 2021ರಂದು ಮದುವೆಯಾದ ನಾಲ್ಕು ವರ್ಷಗಳ ನಂತರ ತಮ್ಮ ಪತ್ನಿ ಸಮಂತಾ ರುತ್ ಪ್ರಭು ಅವರೊಂದಿಗೆ ವಿಚ್ಛೇದನ ಪಡೆದರು. ಬೇರ್ಪಟ್ಟ ನಂತರ ಎಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ.

ಅಷ್ಟೇ ಅಲ್ಲದೆ ವಿಚ್ಛೇದನದ ನಂತರ ತಾನು ಸಾಕಷ್ಟು ಬದಲಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ʻʻಈ ಮೊದಲು ಹೆಚ್ಚಾಗಿ ಯಾರೊಂದಿಗೂ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಸಾಧ್ಯವಾಗುತ್ತಿದೆ. ಜತೆಗೆ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹೆಚ್ಚು ಹತ್ತಿರವಾಗುತ್ತಿದ್ದೇನೆ. ಸಂಪೂರ್ಣವಾಗಿ ಹೊಸ ವ್ಯಕ್ತಿಯಾಗಿ ನಾನು ನನ್ನನ್ನು ನೋಡಲು ಸಂತೋಷವಾಗುತ್ತಿದೆʼ ಎಂದು ಹೇಳಿಕೊಂಡಿದ್ದಾರೆ.

ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆಮೀರ್ ಖಾನ್ ಅವರು ಮುಖ್ಯಪಾತ್ರದಲ್ಲಿ ನಟಿಸಲಿರುವ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ಚೈತನ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು ಟಾಮ್ ಹ್ಯಾಂಕ್ಸ್ ಅಭಿನಯದ ಹಾಲಿವುಡ್ ಚಲನಚಿತ್ರ ‘ಫಾರೆಸ್ಟ್ ಗಂಪ್’ನ ಹಿಂದಿ ರೂಪಾಂತರವಾಗಿದೆ. ಇದರಲ್ಲಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಲಾಲ್ ಸಿಂಗ್ ಛಡ್ಡಾ’ ಆಗಸ್ಟ್ 11 ರಂದು ತೆರೆಗೆ ಬರಲಿದೆ.

ಇದನ್ನೂ ಓದಿ | Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

Exit mobile version