Site icon Vistara News

Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

Kotee Movie in Davanagere Release event

ಬೆಂಗಳೂರು: ಡಾಲಿ ಧನಂಜಯ್ (Dolly Dhananjay) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೋಟಿ’ ಜೂನ್ 14ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.‌ ಈಗಾಗಲೇ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಇದೇ ಬುಧವಾರ (ಮೇ.12) ‘ಕೋಟಿ’ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಲಿದೆ.

‘ಕೋಟಿ’ಯ ಪ್ರಮೋಶನ್ ಸಲುವಾಗಿ ಡಾಲಿ ಧನಂಜಯ ದಾವಣಗೆರೆಗೆ ತೆರಳಿದ್ದರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ‘ದವನ ಫೆಸ್ಟ್’ ಅತಿದೊಡ್ಡ ಕಾಲೇಜ್ ಫೆಸ್ಟಿವಲ್‌ಗಳಲ್ಲೊಂದು. ಇಲ್ಲಿಗೆ ಡಾಲಿ ಮುಖ್ಯ ಅತಿಥಿಯಾಗಿ ಬಂದಿದ್ದು ಅಭಿಮಾನಿಗಳನ್ನು ಖುಷಿಯ ಕಡಲಿನಲ್ಲಿ ತೇಲಿಸಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಸೇರಿದ್ದ ಈ ಸಮಾರಂಭದಲ್ಲಿ ಡಾಲಿಯ ಜತೆ ಕೋಟಿಯ ನಾಯಕಿ ಮೋಕ್ಷಾ ಕುಶಾಲ್, ಸಹಕಲಾವಿದರಾದ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಮತ್ತು ಅಭಿಷೇಕ್ ಶ್ರೀಕಾಂತ್ ಪಾಲ್ಗೊಂಡಿದ್ದರು.

ಡಾಲಿ ಧನಂಜಯ ‘ದವನ’ದ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಕೇಕೆ, ಕೂಗಾಟ ಮುಗಿಲ ಮುಟ್ಟಿತ್ತು. ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಕೋಟಿ’ಯ ಟೀಸರ್ ಮತ್ತು ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಧನಂಜಯ್ ಕಾರ್ಯಕ್ರಮದಿಂದ ವಾಪಸ್ಸು ಹೋಗುವವರೆಗೂ ಇಡೀ ಕಾಲೇಜಿನ‌ ಮೂಲೆಮೂಲೆಯಲ್ಲಿ ‘ಡಾಲಿ ಡಾಲಿ’ ಎಂಬ ಅಭಿಮಾನಿಗಳ‌ ಪ್ರೀತಿಯ ದನಿ ಮೊಳಗುತ್ತಿತ್ತು.

ಜೂನ್ 14 ರಂದು ಬಿಡುಗಡೆಗೆ ಸಿದ್ಧವಾಗಿರುವ ʻಕೋಟಿʼ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Kannada Upcoming Movies: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಲು ಬರುತ್ತಿವೆ ಕನ್ನಡ ಸಿನಿಮಾಗಳು!

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ʻಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮೆರಮನ್.

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Exit mobile version