ಕೋಲ್ಕತ್ತ: ಗಾಯಕ ಕೃಷ್ಣಕುಮಾರ್ ಕುನ್ನಾಥ್ (Krishnakumar Kunnath) ಸಾವು ಅಸಹಜವಲ್ಲ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಸ್ಪಷ್ಟಪಡಿಸಿದೆ. ಕೆಕೆ ನಿನ್ನೆ ರಾತ್ರಿ ಕೋಲ್ಕತ್ತದ ನಜ್ರುಲ್ ಮಂಚಾ ಅಡಿಟೋರಿಯಂನಲ್ಲಿ ಕನ್ಸಾರ್ಟ್ ನಡೆಸಿ, ಸಂಗೀತ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮೃತಪಟ್ಟಿದ್ದಾರೆ. ಕೆಕೆ ಮೃತದೇಹದ ಮೇಲೆ ಗಾಯದ ಗುರುತು ಕಂಡುಬಂದಿತ್ತು. ತಲೆ ಮತ್ತು ತುಟಿಯ ಬಳಿ ಏಟಾಗಿದ್ದು ಕಾಣಿಸಿದ್ದರಿಂದ ಕೋಲ್ಕತ್ತ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಇಂದು ಕೆಕೆ ಮೃತದೇಹವನ್ನು ಪೋಸ್ಟ್‌ಮಾರ್ಟಮ್ ಮಾಡಲಾಗಿದ್ದು ಅದರ ಪ್ರಾಥಮಿಕ ವರದಿ ಬಂದಿದೆ. ಇದು ಅಸಹಜ ಸಾವಲ್ಲ ಎಂದು ಹೇಳಲಾಗಿದೆ. ಅಂತಿಮ ವರದಿ 72 ಗಂಟೆಗಳ ಬಳಿಕ ಬರಲಿದೆ.
ಕೃಷ್ಣಕುಮಾರ್ ಕುನ್ನಾಥ್ ಅಂತ್ಯಕ್ರಿಯೆ ಮುಂಬೈನಲ್ಲಿ ಜೂ.2ರಂದು ನಡೆಯಲಿದೆ. ಅದಕ್ಕೂ ಪೂರ್ವ ಇಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದಿಂದ ರಬೀಂದ್ರ ಸದನದಲ್ಲಿ ಗಾಯಕನಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಗನ್ ಸೆಲ್ಯೂಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಜಿಲ್ಲಾ ಪ್ರವಾಸಕ್ಕೆ ಹೊರಟಿದ್ದ ಸಿಎಂ ಮಮತಾ ಬ್ಯಾನರ್ಜಿ ಅದನ್ನು ಮೊಟಕುಗೊಳಿಸಿ, ಕುನ್ನಾಥ್‌ರಿಗೆ ಗೌರವ ಅರ್ಪಿಸಿದರು. ಕೆಕೆ ನಿಧನದ ಬೆನ್ನಲ್ಲೇ ಕೋಲ್ಕತ್ತಕ್ಕೆ ಆಗಮಿಸಿರುವ ಅವರ ಪತ್ನಿ ಮತ್ತಿತರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. ಕೃಷ್ಣಕುಮಾರ್ ಕುನ್ನಾಥ್ ಒಬ್ಬರು ಯುತ್ ಐಕಾನ್ ಆಗಿದ್ದರು, ಅಪರೂಪದ ಹಾಡುಗಾರ ಎಂದು ಹೇಳಿದರು.
ಕೃಷ್ಣಕುಮಾರ್ ಕುನ್ನಾಥ್ ಮೃತದೇಹವನ್ನು ಇಂದೇ ಮುಂಬೈನ ವೆರ್ಸೋವಾದ ಪಾರ್ಕ್ ಪ್ಲಾಜಾದಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ನಾಳೆ ಅವರ ಮನೆಯ ಸಮೀಪದಲ್ಲೇ ಇರುವ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಕಿಕ್ಕಿರಿದು ತುಂಬಿತ್ತು ಸಭಾಂಗಣ, ಕೆಕೆ ತುಂಬ ಬೆವರುತ್ತಿದ್ದರು; ವೇದಿಕೆ ಮೇಲೆ ಗಾಯಕನ ಕೊನೇ ಕ್ಷಣ