ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನಾಥ್ (krishnakumar kunnath) ತಮ್ಮ 53ನೇ ವರ್ಷಕ್ಕೆ ಬದಕು ಮುಗಿಸಿದ್ದಾರೆ. ಮಂಗಳವಾರ ರಾತ್ರಿ ಕೋಲ್ಕತ್ತದ ವಿವೇಕಾನಂದ ಕಾಲೇಜಿನ ನಜ್ರುಲ್ ಮಂಚಾ ಅಡಿಟೋರಿಯಂನಲ್ಲಿ ಫುಲ್ ಖುಷಿಯಲ್ಲಿ, ಎಂದಿನ ಜೋಶ್‌ನಲ್ಲೇ ಹಾಡು ಹಾಡಿದರು. ಕೋಲ್ಕತ್ತಕ್ಕೆ ಹೋಗುವ ಮೊದಲು ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮ್ಯೂಸಿಕ್ ತಂಡದೊಂದಿಗೆ ಇರುವ ಸೆಲ್ಫೀ ಕೂಡ ಶೇರ್ ಮಾಡಿಕೊಂಡು ʼಕೋಲ್ಕತ್ತಕ್ಕೆ ಹೊರಟಿದ್ದೇವೆʼ ಎಂದು ಅಪ್‌ಡೇಟ್ ಕೊಟ್ಟಿದ್ದರು. ಇವರು ಕೋಲ್ಕತ್ತದಲ್ಲಿ ಸಂಗೀತ ಗೋಷ್ಠಿಗೆ ಹೋಗುವ ಮೊದಲು ಪುಣೆಯ ಅಡಿಟೋರಿಯಂ ಒಂದರಲ್ಲಿ ಸಂಗೀತದೌತಣ ಬಡಿಸಿದ್ದರು. ಕೋಲ್ಕತ್ತ ತಲುಪಿ ಮಂಗಳವಾರ ಸಂಜೆ 6ಗಂಟೆಗೆಲ್ಲ ಅವರ ಕಾರ್ಯಕ್ರಮವೂ ಶುರುವಾಗಿ ಎಲ್ಲವೂ ಚೆನ್ನಾಗೇ ನಡೆದಿತ್ತು. ಆದರೆ ರಾತ್ರಿ 10ಗಂಟೆಯಷ್ಟರಲ್ಲಿ ಅವರೇ ಇರಲಿಲ್ಲ.
ಕೃಷ್ಣಕುಮಾರ್ ಬಾಲಿವುಡ್ ಗಾಯಕರೆಂದು ಗುರುತಿಸಿಕೊಂಡಿದ್ದರೂ ಕೂಡ ಅವರು ಕೇವಲ ಹಿಂದಿಹಾಡುಗಳನ್ನು ಮಾತ್ರ ಹಾಡಿದವರಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ, ಗುಜರಾತಿ ಹಾಡುಗಳನ್ನೂ ಹಾಡಿ ಪ್ರಸಿದ್ಧಿಯಾಗಿದ್ದಾರೆ. ತಮ್ಮ 28ನೇ ವಯಸ್ಸಿನಿಂದ ಹಿಂದಿ ಸಿನಿಮಾಗಳಲ್ಲಿ ಹಾಡಲು ಶುರು ಮಾಡಿದ ಕೆಕೆ, ಬಳಿಕ ಒಂದೊಂದೇ ಭಾಷೆಯಲ್ಲಿ ಚಾಪು ಮೂಡಿಸತೊಡಗಿದರು. ಅದರಲ್ಲಿ ಕನ್ನಡದಲ್ಲಿ ಹಾಡಿದ ಹಾಡುಗಳ ಪಟ್ಟಿ ಇಲ್ಲಿದೆ..
1. ʼಲವ್ʼ ಸಿನಿಮಾದ ‘ಏಳುಬಣ್ಣದ ಪ್ರೀತಿಯಿದುʼ ಮತ್ತು ʼಮಾರ್ ಗಯೋರೆʼ ಎಂಬ ಹಾಡುಗಳನ್ನು ಕೃಷ್ಣಕುಮಾರ್ ಕುನ್ನಾಥ್ ಹಾಡಿದ್ದರು. 2004ರಲ್ಲಿ ತೆರೆಕಂಡ, ರಾಜೇಂದ್ರ ಸಿಂಗ್ ಬಾಬು ಸಿಂಗ್ ನಿರ್ದೇಶನದ, ಆದಿತ್ಯ ಮತ್ತು ರಕ್ಷಿತಾ ಅಭಿನಯದ ಲವ್ ಸಿನಿಮಾದಲ್ಲಿ ಎರಡು ಹಾಡುಗಳನ್ನು ಕೆಕೆ ಹಾಡಿದ್ದಾರೆ. ಈ ಹಾಡುಗಳನ್ನು ಕೆ.ಕವಿರಾಜ್ ಬರೆದು, ಅನು ಮಲ್ಲಿಕ್ ಸಂಗೀತ ಸಂಯೋಜನೆ ಮಾಡಿದ್ದರು. ಏಳುಬಣ್ಣದ ಪ್ರೀತಿಯದು ಹಾಡಿನಲ್ಲಿ ಕೆಕೆಗೆ ಸುನಿಧಿ ಚೌಹಾಣ್ ಜತೆಯಾಗಿದ್ದರು ಮತ್ತು ಮಾರ್ ಗಯೋರೆಯಲ್ಲಿ, ಕೆಕೆಯೊಟ್ಟಿಗೆ ನಳಿನಿ, ಜೊಲ್ಲಿ, ಕಲ್ಪನಾ ಎಂಬುವರು ಹಾಡಿದ್ದಾರೆ.
2. ʼರೌಡಿ ಅಳಿಯʼ ಸಿನಿಮಾದ ನನಗಿಂತ ʼಯಾರು, ನನ್ನ ಮುಂದೆ ಯಾರುʼ ಎಂಬ ಹಾಡಿನಲ್ಲಿ ಕೆಕೆ ಗಾಯನವಿದೆ. ಕೆ. ಕಲ್ಯಾಣ್ ಸಾಹಿತ್ಯಕ್ಕೆ ಸುನಿಧಿ ಚೌಹಾಣ್ ಮತ್ತು ಕೆಕೆ ಧ್ವನಿಯಾಗಿದ್ದರು. ಈ ಸಿನಿಮಾ ಕೂಡ 2004ರಲ್ಲಿ ತೆರೆ ಕಂಡಿತ್ತು. ಇದು ಓಂ ಸಾಯಿಪ್ರಕಾಶ್ ನಿರ್ದೇಶಿಸಿ, ಶಿವರಾಜ್ ಕುಮಾರ್ ಮತ್ತು ಪ್ರಿಯಾಂಕಾ. ಜಯಮಾಲಾ ಅಭಿನಯದ ಚಿತ್ರ.
3. ‘ಸಾರ್ವಭೌಮʼ ಚಲನಚಿತ್ರದಲ್ಲಿ ʼಸೆಲ್ಫಿಶ್..ಸೆಲ್ಫಿಶ್ಶುʼ ಎಂಬ ಹಾಡನ್ನು ಕೃಷ್ಣಕುಮಾರ್ ಕುನ್ನಾಥ್ ಹಾಡಿದ್ದಾರೆ. ಇದು ಶಿವರಾಜ್‌ಕುಮಾರ್ ಅಭಿನಯದ ಚಿತ್ರವಾಗಿದ್ದು, 2004ರಲ್ಲಿ ತೆರೆಕಂಡಿದೆ. ಹಂಸಲೇಖ ಸಾಹಿತ್ಯ ಬರೆದು, ಸಂಯೋಜನೆ ಮಾಡಿದ್ದರು.
4. 2005ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ʼನ್ಯೂಸ್ʼ ಎಂಬ ಸಿನಿಮಾ ತೆರೆಕಂಡಿದ್ದು ನೆನೆಪಿರಬಹುದು. ಅದರಲ್ಲಿ ‘ಗಿರಗಿರ ಕಣ್ಣುಗಳ ಸರದಾರʼ ಎಂಬುದೊಂದು ಹಾಡಿದೆ. ಅದಕ್ಕೆ ಧ್ವನಿಯಾಗಿದ್ದು ಇದೇ ಕೃಷ್ಣಕುಮಾರ್ ಕನ್ನಾಥ್. ಸಂಗೀತ ನಿರ್ದೇಶನ ಮಾಡಿದ್ದು ಗುರುಕಿರಣ್. ಇದರಲ್ಲಿ ಕೆಕೆ ಜತೆ ಗಾಯಕಿ ಪ್ರಿಯದರ್ಶಿನಿ ಧ್ವನಿಯಾಗಿದ್ದರು.
5. ʼಮದನʼ ಸಿನಿಮಾದಲ್ಲಿ ʼಕಣ್ಣು ನಿನ್ನದು..ಕನಸು ನಿನ್ನದುʼ ಎಂಬ ಹಾಡನ್ನು ಅತ್ಯಂತ ಸುಂದರವಾಗಿ ಹಾಡಿದ್ದರು ಕೃಷ್ಣಕುಮಾರ್ ಕುನ್ನಾಥ್. ಕೆ. ಕಲ್ಯಾಣ್ ಈ ಹಾಡನ್ನು ಬರೆದಿದ್ದರೆ, ಯುವಾನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದರು. ಇದ ಜೈ ಜಗದೀಶ್ ನಿರ್ದೇಶಿಸಿ, ಆದಿತ್ಯ ಅಭಿನಯಿಸಿದ್ದ ಸಿನಿಮಾ. 2006ರಲ್ಲಿ ತೆರೆಕಂಡಿತ್ತು.
6. 2008ರಲ್ಲಿ ಬಿಡುಗಡೆಯಾಗಿದ್ದ ʼನೀಯಾರೆʼ ಎಂಬ ಚಲನಚಿತ್ರದಲ್ಲಿ ʼಸೂಪರ್ ಕಂಪ್ಯೂಟರ್ʼ ಹಾಡಿಗೂ ಕೆಕೆ ಧ್ವನಿಯಾಗಿದ್ದಾರೆ. ಇದನ್ನು ಸಂಯೋಜನೆ ಮಾಡಿದ್ದು ವಿ ಮನೋಹರ್. ಆದರೆ ಈ ಸಿನಿಮಾವಾಗಲೀ, ಹಾಡಾಗಲೀ ಅಷ್ಟು ಫೇಮಸ್ ಆಗಲಿಲ್ಲ.
7. 2009ರಲ್ಲಿ ತೆರೆಕಂಡ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಕೃಷ್ಣಕುಮಾರ್ ಕುನ್ನಾಥ್ ಗಾಯನವಿತ್ತು. ಅದರಲ್ಲಿ ತರುಣ್ ಚಂದ್ರ-ರೇಖಾ ಅಭಿನಯದ ʼಪರಿಚಯʼ ಸಿನಿಮಾದ ʼನಡೆದಾಡುವ ಕಾಮನಬಿಲ್ಲುʼ ಹಾಡನ್ನು ಹಾಡಿದ್ದರು. ದಿಗಂತ್ ಮತ್ತು ಐಂದ್ರಿತಾ ರೈ ನಟಿಸಿದ್ದ ʼಮನಸಾರೆʼ ಚಿತ್ರದ ʼಕಣ್ಣ ಹನಿಯೊಂದಿಗೆʼ -ಶ್ರೀನಗರ ಕಿಟ್ಟಿ ಹಾಗೂ ಪಾರ್ವತಿ ಮೆನನ್ ಮುಖ್ಯ ಭೂಮಿಕೆಯ ʼಮಳೆ ಬರಲಿ ಮಂಜೂ ಇರಲಿʼ ಸಿನಿಮಾದ ʼವಿದಾಯದ ವೇಳೆಯಲ್ಲಿʼ ಎಂಬ ಹಾಡುಗಳನ್ನು ಅದ್ಭುತವಾಗಿ ಹಾಡಿದ್ದರು. ಈ ಹಾಡುಗಳು ಸೂಪರ್‌ಹಿಟ್ ಆಗಿದ್ದವು. ಇದೇ ವರ್ಷ ಬಿಡುಗಡೆಯಾಗಿದ್ದ, ಲೂಸ್ ಮಾದ ಯೋಗಿ ಅಭಿನಯದ ʼಯೋಗಿʼ ಸಿನಿಮಾದಲ್ಲಿ ‘ಬ್ರ್ಯೂಸ್ ಲೀ ವಂಶ..ʼ ಹಾಡನ್ನೂ ಹಾಡಿದ್ದರು.
8. ʼಸಂಚಾರಿʼ ಚಿತ್ರದ ʼಮರೆತೋದ ಮಾತಿದೆ..ನುಡಿಬೇಕು ಅನಿಸಿದೆ..ʼ ಹಾಡನ್ನು ನೀವು ಕೇಳಿರಬಹುದು. ಆ ಸಾಂಗ್ ಮೂಡಿಬಂದಿದ್ದು ಇದೇ ಕೆಕೆ ಧ್ವನಿಯಲ್ಲಿ. ಅರ್ಜುನ್ಯ ಜನ್ಯ ಸಂಗೀತ ನಿರ್ದೇಶನ ಮಾಡಿದ್ದರೆ, ಕೆಕೆಗೆ ಗಾಯಕಿ ಅನುರಾಧಾ ಭಟ್ ಜತೆಯಾಗಿದ್ದಾರೆ. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಗಿತ್ತು.
9. 2014ರಲ್ಲಿ ತೆರೆಕಂಡ ʼಬಹುಪರಾಕ್ʼ ಮತ್ತು ʼಆರ್ಯನ್ʼ ಚಲನಚಿತ್ರಗಳಲ್ಲಿ ಕೆಕೆ ಗಾಯನವಿದೆ. ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ಅಭಿನಯದ ಬಹುಪರಾಕ್‌ನಲ್ಲಿ ʼಸ್ನೇಹಾ ಎಂಬುದುʼ ಎಂಬ ಹಾಡನ್ನು ಮತ್ತು ಶಿವರಾಜ್ ಕುಮಾರ್-ರಮ್ಯಾ ನಟನೆಯ ಆರ್ಯನ್ ಸಿನಿಮಾದಲ್ಲಿ ʼ ಒಂದು ಹಾಡು ಮೆಲ್ಲಾʼ ಎಂಬ ಗೀತೆಯನ್ನು ಕೆಕೆ ಹಾಡಿದ್ದರು.
ಇದನ್ನೂ ಓದಿ: ಮೃತ ಗಾಯಕ ಕೆಕೆ ತುಟಿ, ತಲೆ ಬಳಿ ಗಾಯ; ಅಸಹಜ ಸಾವು ಕೇಸ್ ದಾಖಲಿಸಿದ ಕೋಲ್ಕತ್ತ ಪೊಲೀಸ್