Site icon Vistara News

laal singh chaddha | ಆಮೀರ್‌ ಖಾನ್‌ ಸಿನಿಮಾಗೆ ಒಟಿಟಿ ರೈಟ್ಸ್‌ ಕೇಳುವವರೇ ದಿಕ್ಕಿಲ್ವಾ?

ಒಂದಾನೊಂದು ಕಾಲದಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸುತ್ತಿದ್ದ ಬಾಲಿವುಡ್ ಸ್ಟಾರ್ಸ್ ಸಿನಿಮಾಗಳನ್ನ ಈಗ ಕೇಳುವವರೇ ದಿಕ್ಕಿಲ್ಲ. ಅತ್ತ ಥಿಯೇಟರ್‌ನಲ್ಲಿ ಸಿನಿಮಾ ಮಕಾಡೆ ಮಲಗುತ್ತಿದ್ದರೆ, ಮತ್ತೊಂದೆಡೆ ಒಟಿಟಿ ರಿಲೀಸ್‌ಗೂ ಸುಲಭವಾಗಿ ಯಾರೂ ಒಪ್ಪುತ್ತಿಲ್ಲ. ಈ ಪಟ್ಟಿಯಲ್ಲಿ ನಟ ಆಮೀರ್‌ ಖಾನ್‌ ಸಿನಿಮಾ ಕೂಡ ಸೇರ್ಪಡೆಯಾಗಿದೆ. ‘ಲಾಲ್ ಸಿಂಗ್ ಚಡ್ಡಾ’ (laal singh chaddha) ಸಿನಿಮಾಗೆ ಹಾಕಿದ ಬಂಡವಾಳವನ್ನು ವಾಪಸ್‌ ತೆಗೆಯೋಕು ನಟ ಆಮೀರ್‌ ಖಾನ್‌ ಪರದಾಡುವಂತಾಗಿದೆ.

ನೆಟ್‌ಫ್ಲಿಕ್ಸ್‌ ಸೇರಿ ಹಲವು ಒಟಿಟಿ ಪ್ಲಾಟ್‌ಫಾರಂಗಳ ಜೊತೆಗೆ ಮಾತುಕತೆ ನಡೆಸಿದ್ದರು ಆಮೀರ್‌ ಖಾನ್‌. ಆದರೆ ಎಲ್ಲೋ ಏನೋ ಎಡವಟ್ಟಾಗಿದೆ. ಇದೇ ಕಾರಣಕ್ಕಾಗಿ ಇನ್ನೂ ‘ಲಾಲ್ ಸಿಂಗ್ ಚಡ್ಡಾ’ ಒಟಿಟಿ ರೈಟ್ಸ್‌ ಕನ್ಫರ್ಮ್‌ ಆಗಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ₹180 ಕೋಟಿ ಬಂಡವಾಳ ಸುರಿದಿದ್ದರು ಆಮೀರ್‌.‌ ಆದರೆ ₹150 ಕೋಟಿ ಗಡಿಯನ್ನೂ ದಾಟಿಲ್ಲ ‘ಲಾಲ್ ಸಿಂಗ್ ಚಡ್ಡಾ’ ಕಲೆಕ್ಷನ್. ಹೀಗೆ ಲೆಕ್ಕ ಹಾಕಿದರೆ ₹150 ಕೋಟಿಯಲ್ಲಿ ಅರ್ಧದಷ್ಟು ಮೊತ್ತವೂ ನಿರ್ಮಾಪಕರ ಕೈಸೇರಿಲ್ಲ ಎನ್ನಬಹುದು. ಹೀಗಾಗಿ ಒಟಿಟಿ ರೈಟ್ಸ್ ಮೂಲಕ ದೊಡ್ಡ ಮೊತ್ತಕ್ಕಾಗಿ ಚಿತ್ರತಂಡದಿಂದ ಹುಡುಕಾಟ ಸಾಗಿದೆ.

ರೀಮೇಕ್‌ ರಂಪಾಟ..!
1994ರಲ್ಲಿ ರಿಲೀಸ್‌ ಆಗಿದ್ದ ಟಾಮ್ ಹ್ಯಾಂಕ್ಸ್ ಅಭಿನಯದ ‘ಫಾರೆಸ್ಟ್ ಗಂಪ್’ ಸಿನಿಮಾ ಜಗತ್ತಿನಾದ್ಯಂತ ದೊಡ್ಡ ಹಿಟ್‌ ಕಂಡಿತ್ತು ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಗೆದ್ದಿತ್ತು. ಪ್ರೀತಿ, ಭಾವನೆ, ಸಂಬಂಧದ ಬೆಲೆಯನ್ನ ಸೊಗಸಾಗಿ ಕೆತ್ತಿಕೊಟ್ಟಿದ್ದರು ಟಾಮ್ ಹ್ಯಾಂಕ್ಸ್ ಮತ್ತು ರಾಬರ್ಟ್ ಝೆಮೆಕಿಸ್. ‘ಫಾರೆಸ್ಟ್ ಗಂಪ್’ ಚಿತ್ರ ರಾಬರ್ಟ್ ಝೆಮೆಕಿಸ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಅತ್ಯುದ್ಭುತ ನಟನೆಗಾಗಿ ಟಾಮ್ ಹ್ಯಾಂಕ್ಸ್ ಆಸ್ಕರ್‌ ಅವಾರ್ಡ್ ಗೆದ್ದಿದ್ದರು. ಆದ್ರೆ ಈ ಸಿನಿಮಾ ರೀಮೇಕ್‌ ಮಾಡಲು ಹೋಗಿ ಆಮೀರ್‌ ಖಾನ್ ಕೈಸುಟ್ಟುಕೊಂಡಿದ್ದಾರೆಂಬ ಮಾತುಗಳು ಸದ್ಯ ಬಾಲಿವುಡ್‌ ಗಲ್ಲಿಯಲ್ಲಿ ಹರಿದಾಡುತ್ತಿವೆ. ‘ಲಾಲ್ ಸಿಂಗ್ ಚಡ್ಡಾ’ ನೋಡಿದ ಅಭಿಮಾನಿಗಳು ತೀವ್ರ ಬೇಸರ ಹೊರಹಾಕುತ್ತಿದ್ದಾರೆ.

ಫ್ಯಾನ್ಸ್‌ ಬೇಸರ
ಕೆಲವೊಬ್ಬರು ರೀಮೇಕ್‌ ಮಾಡ್ತಾರೆ, ಮತ್ತೆ ಕೆಲವರು ರೀಮೇಕ್‌ ಮಾಡೋದಿಲ್ಲ ಅಂತಾ ಪಣ ತೊಟ್ಟಿರುತ್ತಾರೆ. ಮತ್ತೊಂದಿಷ್ಟು ಸ್ಟಾರ್‌ ನಟರು ರೀಮೇಕ್‌ ಮಾಡಿಯೂ ಸೋತು ಸುಣ್ಣವಾಗ್ತಾರೆ. ಈ ಸಾಲಿಗೆ ಆಮೀರ್‌ ಖಾನ್‌ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಸೇರ್ಪಡೆಯಾಗಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಹಾಲಿವುಡ್‌ ಇಂಡಸ್ಟ್ರಿಯಲ್ಲೇ ದೊಡ್ಡ ಹಿಟ್‌ ಕಂಡಿದ್ದ ಸಿನಿಮಾವನ್ನು ರೀಮೇಕ್‌ ಮಾಡಿಯೂ ಆಮೀರ್‌ ಖಾನ್‌ ದೊಡ್ಡ ಗೆಲುವು ಕಾಣಲಾಗಿಲ್ಲ. ಇದು ಸಹಜವಾಗಿ ಆಮೀರ್‌ ಖಾನ್‌ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

IMDB ಸೋಲು..!
‌ಆಮೀರ್‌ ಖಾನ್‌ ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಭಾರತದಲ್ಲಿ ದೊಡ್ಡ ಮಟ್ಟಿಗೆ ಸೋಲು ಕಂಡಿದೆ. ಹಾಕಿದ ಬಂಡವಾಳ ಪಡೆಯಲು ಲಾಲ್ ಸಿಂಗ್ ಚಡ್ಡಾ ಪರದಾಡುತ್ತಿದೆ. ಇದರ ಜೊತೆಗೆ IMDB ರೇಟಿಂಗ್‌ನಲ್ಲೂ ಭಾರಿ ಹಿನ್ನಡೆಯೇ ಎದುರಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಸದ್ಯ 10 ಅಂಕಕ್ಕೆ 5 ರೇಟಿಂಗ್‌ ಪಡೆದಿದೆ. ಒಟ್ಟು1 ಲಕ್ಷ 60 ಸಾವಿರ ಸದಸ್ಯರು IMDBಯಲ್ಲಿ ವೋಟಿಂಗ್‌ ಮಾಡಿದ್ದಾರೆ. ಆದರೆ ಕೇವಲ 5 ರೇಟಿಂಗ್‌ ಪಡೆದಿದೆ ಆಮಿರ್‌ ಸಿನಿಮಾ.

‘ಕೆಜಿಎಫ್‌’ ಹವಾ..!
28 ವರ್ಷಗಳ ಬಳಿಕ ಬ್ಲಾಕ್‌ ಬಸ್ಟರ್‌ ಹಿಟ್‌ ‘ಫಾರೆಸ್ಟ್ ಗಂಪ್’ ಚಿತ್ರ ರೀಮೇಕ್‌ ಮಾಡಿದ ಆಮೀರ್‌ ಸಾಕಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು. ಮೊದಲಿಗೆ ಕನ್ನಡದ ‘ಕೆಜಿಎಫ್-2’‌ ಎದುರು ರಿಲೀಸ್‌ ಮಾಡುವ ಬಗ್ಗೆ ಪ್ಲ್ಯಾನ್‌ ಹಾಕಿಕೊಂಡಿದ್ದರು ಆಮೀರ್‌ ಖಾನ್.‌ ಆದರೆ ‘ಕೆಜಿಎಫ್-2’‌ ಸುಂಟರ ಗಾಳಿಗೆ ಬೆಚ್ಚಿದ್ದ ಆಮೀರ್‌ ಖಾನ್‌ & ಟೀಂ, ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್‌ ಡೇಟ್‌ ಮುಂದೆ ಹಾಕಿಕೊಂಡಿತ್ತು. ಹೀಗೆ ಲೇಟ್‌ ಆಗಿ ಸಿನಿಮಾ ರಿಲೀಸ್‌ ಮಾಡಿ ಕೂಡ ಸೋತಿದ್ದಾರೆ ಬಾಲಿವುಡ್‌ ಸ್ಟಾರ್‌ ನಟ.

ಒಟ್ಟಾರೆ ಬಾಲಿವುಡ್‌ ಸ್ಟಾರ್‌ ನಟರಿಗೆ ಸಾಲು ಸಾಲಾಗಿ ಶಾಕ್‌ ಸಿಗುತ್ತಿದೆ. ಜಗತ್ತಿನ ತುಂಬಾ ತಮ್ಮದೇ ಹವಾ ಇಟ್ಟುಕೊಂಡಿದ್ದ ಸಿನಿಮಾ ಇಂಡಸ್ಟ್ರಿ ಬಾಲಿವುಡ್‌. ಆದರೆ ಈಗ ಹಾಕಿದ ಬಂಡವಾಳ ಬಂದರೆ ಸಾಕಪ್ಪಾ ಎಂಬ ಪರಿಸ್ಥಿತಿ ಇದೆ. ಈ ಪಟ್ಟಿಯಲ್ಲಿ ಇನ್ನೂ ಹಲವು ಬಾಲಿವುಡ್‌ ಸ್ಟಾರ್‌ಗಳು ಇದ್ದಾರೆ. ಅದರಲ್ಲೂ ‘ಲಾಲ್ ಸಿಂಗ್ ಚಡ್ಡಾ’ ಸೋಲು ದೊಡ್ಡ ಪಾಠ ಕಲಿಸಿದೆ. ನೂರಾರು ಕೋಟಿ ವೆಚ್ಚ ಮಾಡಿ, 3 ವರ್ಷ ಶ್ರಮಪಟ್ಟು ಸಿನಿಮಾ ತೆಗೆದರೂ ಫ್ಯಾನ್ಸ್‌ ಮನ ಗೆಲ್ಲುವಲ್ಲಿ ಆಮೀರ್ ವಿಫಲವಾಗಿದ್ದು ವಿಪರ್ಯಾಸ.

ಇದನ್ನೂ ಓದಿ: Oscar | ವಿರೋಧದ ಮಧ್ಯೆಯೂ ಲಾಲ್ ಸಿಂಗ್‌ ಚಡ್ಡಾ ಸಿನಿಮಾಗೆ ಆಸ್ಕರ್‌ ಮೆಚ್ಚುಗೆ

Exit mobile version