ಬೆಂಗಳೂರು: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಭಿನ್ನ ಸಿನಿಮಾಗಳನ್ನು ನೀಡುವುದರಲ್ಲಿ ಎತ್ತಿದ ಕೈ. ತಮಗೆ ಅನ್ನಿಸಿದ್ದನ್ನು ಅಂದುಕೊಂಡಂತೆಯೇ ಸಿನಿಪ್ರಿಯರ ಮುಂದೆ ತರುವಲ್ಲಿ ನಿಸ್ಸೀಮ. ಹೊಸತನಕ್ಕೆ ಮಿಡಿಯುವ, ಹೊಸತನವನ್ನು ಬಿಂಬಿಸುವ ಆರ್‌ಜಿವಿ ಈಗ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜುಲೈ ೧೫ಕ್ಕೆ ದೇಶ ಸೇರಿದಂತೆ ವಿದೇಶದಲ್ಲೂ ತೆರೆಗೆ ಬರಲಿದೆ.
ಅಂದಹಾಗೆ ಈ ಸಿನಿಮಾ ಹೆಸರು “ಲಡ್ಕಿ” (Ladki Film). ಕನ್ನಡದಲ್ಲಿ “ಹುಡುಗಿ” ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಈ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದಾರೆ. ಹುಡುಗಿ ಯಾವ ತರ ಕಾಣಿಸಿಕೊಳ್ಳಲಿದ್ದಾಳೆ? ಯಾವ ರೀತಿ ಬಿಂಬಿಸಲಾಗಿದೆ? ಹೇಗೆ ಭಿನ್ನವಾಗಿರಲಿದೆ ಎಂಬ ಕುತೂಹಲದೊಂದಿಗೆ ಸಿನಿಪ್ರಿಯರು ಹಾಗೂ ಆರ್‌ಜಿಬಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್
ಚೀನಾದ 40 ಸಾವಿರ ಸ್ಕ್ರೀನ್‌ನಲ್ಲಿ ಲಡ್ಕಿ
ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ, ಇದೊಂದು ಇಂಡೋ ಚೈನೀಸ್ ಪ್ರೊಡಕ್ಷನ್ ಸಿನಿಮಾ. ಹಾಗಾಗಿ ಚೀನಾದ ಸುಮಾರು 40 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ‘ಲಡ್ಕಿ’ ತೆರೆಗೆ ಬರುತ್ತಿದೆ. ತ್ರಿಕೋನ ಪ್ರೇಮ ಕಥೆಯ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದ್ದು, ಚೀನಾದ ನೇಟಿವಿಟಿಯನ್ನು ಒಳಗೊಳ್ಳಲಾಗಿದೆಯೇ ಎಂಬ ಗುಟ್ಟನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.
ಮಾರ್ಷಲ್ ಆರ್ಟ್ಸ್ ಹಿನ್ನೆಲೆಯ ಬಹುಭಾಷಾ ಸಿನಿಮಾ
ಈ ಸಿನಿಮಾ ಮಹಿಳಾ ಪ್ರಧಾನವಾಗಿದ್ದು, ಮಾರ್ಷಲ್ ಆರ್ಟ್ಸ್ ಕೇಂದ್ರಿತವಾಗಿ ಚಿತ್ರಿಸಲಾಗಿದೆ. ಪೂಜಾ ಭಾಲೇಕರ್ ನಾಯಕಿಯಾಗಿ ನಟಿಸಿದ್ದಾರೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ, “ಈ ಸಿನಿಮಾ ತುಂಬಾ ವಿಶೇಷವಾಗಿದೆ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಫೂರ್ತಿ ಪಡೆದುಕೊಂಡಿದ್ದೇನೆ. ಮಾರ್ಷಲ್ ಆರ್ಟ್ಸ್ ಇಲ್ಲಿ ಪ್ರಧಾನವಾಗಿದೆ. ಈ ಕಲೆಯನ್ನು ಹೊಂದಿರುವವರು ಬಹಳ ವಿರಳ. ಅದರಲ್ಲಿಯೂ ಹೆಣ್ಣು ಮಕ್ಕಳು ಸ್ವಲ್ಪ ದೂರವೇ ಇದ್ದಾರೆ. ನಾಯಕಿ ಪೂಜಾ ಹನ್ನೆರಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರು ಅದ್ಭುತವಾಗಿ ನಟಿಸಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | ದ್ರೌಪದಿ ಮುರ್ಮು ಅವಹೇಳನ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್
ಇದನ್ನೂ ಓದಿ | ದ್ರೌಪದಿ ಮುರ್ಮು ಅವಹೇಳನ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್