Site icon Vistara News

Lady Superstar: ಖ್ಯಾತ ನಿರ್ದೇಶಕರ ಚಿತ್ರದಲ್ಲಿ ನಟಿಸ್ತಾರಾ ನಯನತಾರಾ?

nayanthara

nayanthara

ಮುಂಬೈ: ಶಾರುಖ್‌ ಖಾನ್‌ ನಟನೆಯ ʼಜವಾನ್‌ʼ (Jawan) ಚಿತ್ರದ ಮೂಲಕ ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Lady superstar Nayanthara) ಭರ್ಜರಿಯಾಗಿಯೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದ ಅವರು ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಸಿದ ಹಿಂದಿ ಚಿತ್ರ ಎನ್ನುವ ಖ್ಯಾತಿಗೆ ʼಜವಾನ್‌ʼ ಪಾತ್ರವಾಗಿದೆ. ಇತ್ತ ನಯನತಾರಾ ಬಾಲಿವುಡ್‌ನ ಯಶಸ್ವಿ ನಿರ್ದೇಶಕ, ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸಂಜಯ್‌‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸುತ್ತಾರಾ ನಯನತಾರಾ?

ಸದ್ಯ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಯನತಾರಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ಆಲಿಯಾ ಭಟ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಇದೀಗ ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ತಮ್ಮ ಎರಡನೇ ಬಾಲಿವುಡ್‌ ಚಿತ್ರದ ಬಗ್ಗೆ ಸಂಜಯ್‌ ಲೀಲಾ ಬನ್ಸಾಲಿ ಜತೆ ಈಗಾಗಲೇ ನಯನತಾರಾ ಚರ್ಚೆ ನಡೆಸಿ ನಟಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಣವೀರ್‌ ಸಿಂಗ್‌ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1952ರಲ್ಲಿ ತೆರೆಕಂಡ ‘ಬೈಜು ಬವ್ರಾ’ ಚಿತ್ರದ ರಿಮೇಕ್‌ ಎನ್ನಲಾಗಿದ್ದು, ಮೂಲ ಚಿತ್ರದಲ್ಲಿ ಭರತ್ ಭೂಷಣ್-ಮೀನಾ ಕುಮಾರಿ ನಟಿಸಿದ್ದರು. ಸಂಗೀತಗಾರನೊಬ್ಬನ ಜೀವನದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿತ್ತು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವಂತೆ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ. ಅವರು ಇನ್ನೂ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಮಾರ್ಚ್‌ನಲ್ಲಿ ನಯನತಾರಾ, ಪತಿ ವಿಘ್ನೇಶ್‌ ಶಿವನ್‌ ಜತೆ ಸಂಜಯ್‌ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿ ಈ ಸಿನಿಮಾ ಕುರಿತು ಮಾತುಕತೆ ನಡೆಸಿದ್ದರು ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Jawan Movie: ‘ಜವಾನ್‌’ ಸಿನಿಮಾಗೆ ಅಲ್ಲು ಅರ್ಜುನ್‌ ಫಿದಾ; ಶಾರುಖ್‌ ಹೊಸ ಅವತಾರಕ್ಕೆ ಮೆಚ್ಚುಗೆ

ಸದ್ಯ ಸಂಜಯ್‌ ಲೀಲಾ ಬನ್ಸಾಲಿ ʼಹೀರಮಂಡಿʼ ವೆಬ್‌ ಸೀರಿಸ್‌ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಇದಾದ ಬಳಿಕ ಮುಂದಿನ ವರ್ಷ ‘ಬೈಜು ಬವ್ರಾ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. 2022ರಲ್ಲಿ ಸಂಜಯ್‌ ಲೀಲ ಬನ್ಸಾಲಿ ನಿರ್ದೇಶನದ ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ತೆರೆಕಂಡಿತ್ತು. ಇದರಲ್ಲಿನ ಅಭಿನಯಕ್ಕೆ ಆಲಿಯಾ ಭಟ್‌ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. 2015ರಲ್ಲಿ ಬಿಡುಗಡೆಯಾದ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ-ಪ್ರಿಯಾಂಕಾ ಚೋಪ್ರಾ ಅಭಿನಯದ ʼಬಾಜಿರಾವ್‌ ಮಸ್ತಾನಿʼ ಚಿತ್ರಕ್ಕಾಗಿ ಸಂಜಯ್‌ ಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕ, 2018ರ ʼಪದ್ಮಾವತ್‌ʼ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರು. ಹೀಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version