Site icon Vistara News

Lal Singh Chaddha | ಬಾಕ್ಸ್‌ ಆಫಿಸ್‌ನಲ್ಲಿ‌ ಆಮೀರ್‌ ಖಾನ್‌ಗೆ ದೊಡ್ಡ ಶಾಕ್‌!

Lal Singh Chaddha

ಬೆಂಗಳೂರು: ಕೆಲವೊಬ್ಬರು ರೀಮೇಕ್‌ ಮಾಡುತ್ತಾರೆ, ಮತ್ತೆ ಕೆಲವರು ರೀಮೇಕ್‌ ಮಾಡೋದೆ ಇಲ್ಲ ಎಂದು ಪಣ ತೊಟ್ಟಿರುತ್ತಾರೆ. ಮತ್ತೊಂದಿಷ್ಟು ಸ್ಟಾರ್‌ ನಟರು ರೀಮೇಕ್‌ ಮಾಡಿಯೂ ಸೋತು ಸುಣ್ಣವಾಗುತ್ತಾರೆ. ಇದೀಗ ಈ ಸಾಲಿಗೆ ಆಮೀರ್‌ ಖಾನ್‌ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಸೇರ್ಪಡೆಯಾಗಿದೆ. ಏಕಂದರೆ ಹಾಲಿವುಡ್‌ ಇಂಡಸ್ಟ್ರಿಯಲ್ಲೇ ದೊಡ್ಡ ಹಿಟ್‌ ಕಂಡಿದ್ದ ಸಿನಿಮಾವನ್ನು ರೀಮೇಕ್‌ ಮಾಡಿಯೂ ಆಮೀರ್‌ ಖಾನ್‌ ದೊಡ್ಡ ಗೆಲುವು ಕಾಣಲಾಗಿಲ್ಲ.

1994ರಲ್ಲಿ ರಿಲೀಸ್‌ ಆಗಿದ್ದ ಟಾಮ್‌ ಹ್ಯಾಂಕ್ಸ್‌ ಅಭಿನಯದ ‘ಫಾರೆಸ್ಟ್ ಗಂಪ್’ ಸಿನಿಮಾ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯ ಗೆದ್ದಿತ್ತು. ಪ್ರೀತಿ, ಭಾವನೆ, ಸಂಬಂಧಗಳ ಬೆಲೆಯನ್ನು ಟಾಮ್ ಹ್ಯಾಂಕ್ಸ್ ಮತ್ತು ರಾಬರ್ಟ್ ಝೆಮೆಕಿಸ್ ಸೊಗಸಾಗಿ ಕಟ್ಟಿಕೊಟ್ಟಿದ್ದರು. ‘ಫಾರೆಸ್ಟ್ ಗಂಪ್’ ಸಿನಿಮಾ ರಾಬರ್ಟ್ ಝೆಮೆಕಿಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿತ್ತು. ಟಾಮ್ ಹ್ಯಾಂಕ್ಸ್ ಅತ್ಯುದ್ಭುತ ನಟನೆಗಾಗಿ ಆಸ್ಕರ್‌ ಅವಾರ್ಡ್‌ ಗೆದ್ದಿದ್ದರು. ಆದರೆ, ಇದೇ ಸಿನಿಮಾ ರೀಮೇಕ್‌ ಮಾಡಲು ಹೋಗಿ ನಟ ಆಮೀರ್‌ ಖಾನ್ ಕೈಸುಟ್ಟುಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ನೋಡಿದ ಅಭಿಮಾನಿಗಳು ತೀವ್ರ ಬೇಸರ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ | Raksha Bandhan | ಟ್ವೀಟ್‌ನಲ್ಲಿ ಟ್ರೆಂಡ್‌ ಆಯ್ತು ರಕ್ಷಾಬಂಧನ್‌ ಸಿನಿಮಾ: ಅಕ್ಷಯ್‌ ಕುಮಾರ್‌ ನಟನೆಗೆ ಮೆಚ್ಚುಗೆ

ಬರೋಬ್ಬರಿ 28 ವರ್ಷಗಳ ಬಳಿಕ ಬ್ಲಾಕ್‌ ಬಸ್ಟರ್‌ ಹಿಟ್‌ ‘ಫಾರೆಸ್ಟ್ ಗಂಪ್’ ಚಿತ್ರ ರೀಮೇಕ್‌ ಮಾಡಿದ ಆಮೀರ್‌ ಖಾನ್‌ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮೊದಲಿಗೆ ಕನ್ನಡದ ‘ಕೆಜಿಎಫ್-2’ ‌ಎದುರು ಸಿನಿಮಾ ರಿಲೀಸ್‌ ಮಾಡುವ ಬಗ್ಗೆ ಪ್ಲ್ಯಾನ್‌ ಹಾಕಿಕೊಂಡಿದ್ದರು ಆಮೀರ್‌ ಖಾನ್.‌ ಆದರೆ ‘ಕೆಜಿಎಫ್-2’ ಸುಂಟರ ಗಾಳಿಗೆ ಬೆಚ್ಚಿದ್ದ ಆಮೀರ್‌ ಖಾನ್‌ & ಟೀಂ, ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್‌ ಡೇಟ್‌ ಅನ್ನು ಮುಂದಕ್ಕೆ ಹಾಕಿಕೊಂಡಿತ್ತು. ಗುರುವಾರ (ಆ.11) ಸಿನಿಮಾ ರಿಲೀಸ್‌ ಆಗಿದ್ದು, ಸದ್ಯ ದೇಶಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಬಾಕ್ಸ್‌ ಆಫಿಸ್‌ನಲ್ಲೂ ಸದ್ದು ಮಾಡದೆ ಸಪ್ಪೆ ಸಪ್ಪೆಯಾಗಿದೆ.

ಒಟ್ಟಾರೆ ಹೇಳುವುದಾದರೆ ಬಾಲಿವುಡ್‌ ಸ್ಟಾರ್‌ ನಟರಿಗೆ ಮತ್ತೊಮ್ಮೆ ದೊಡ್ಡ ಶಾಕ್‌ ಸಿಕ್ಕಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಮತ್ತೊಂದು ಸಿನಿಮಾ ಇದೀಗ ಸೋಲಿನ ಪಟ್ಟಿಗೆ ಸೇರುವಂತಾಗಿದೆ. ಬಹುತೇಕ ರಿವ್ಯೂಗಳು 5ಕ್ಕೆ 3ರ ಒಳಗೆ ಇದ್ದು, ಇದು ನಟ ಆಮೀರ್‌ ಖಾನ್‌ ಅವರಿಗೆ ನುಂಗಲಾರದ ತುತ್ತಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ, 3 ವರ್ಷ ಶ್ರಮಪಟ್ಟು ಸಿನಿಮಾ ತೆಗೆದರೂ ಫ್ಯಾನ್ಸ್‌ ಮನ ಗೆಲ್ಲುವಲ್ಲಿ ‘ಲಾಲ್ ಸಿಂಗ್ ಚಡ್ಡಾ’ ವಿಫಲವಾಗಿದ್ದು ವಿಪರ್ಯಾಸ.

ಇದನ್ನೂ ಓದಿ | ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್‌ ನೈಟ್ಸ್‌

Exit mobile version