Site icon Vistara News

Varun Tej: ನಟಿ ಲಾವಣ್ಯ ತ್ರಿಪಾಠಿ ಜತೆಗೆ ವರುಣ್ ತೇಜ್ ಎಂಗೇಜ್‌ಮೆಂಟ್‌? ಮೆಗಾ ಫ್ಯಾಮಿಲಿಯಿಂದ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

Lavanya Tripathi and Varun Tej

ಬೆಂಗಳೂರು: ಟಾಲಿವುಡ್ ನಟ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂದು ವರದಿಯಾಗಿತ್ತು. ಆದರೂ ಇಬ್ಬರೂ ಯಾವಾಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡು ಬರುತ್ತಲೇ ಇದ್ದರು. ಇದೀಗ ಮೂಲಗಳ ಪ್ರಕಾರ ಜೂನ್ 9ರಂದು ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಬಳಿಕ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಮದುವೆಗೆ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ ಎನ್ನಲಾಗಿದೆ. ಇನ್ನು ನಿಶ್ಚಿತಾರ್ಥವು ಮನೆಯಲ್ಲಿಯೇ ನಡೆಯಲಿದೆ ಎಂದು ವರದಿಯಾಗಿದೆ.

ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಹೊರದೇಶದಲ್ಲಿದ್ದು, ಜೂನ್ 1ರಂದು ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ವರುಣ್ ತೇಜ್ ಅವರು ರಾಮ್ ಚರಣ್ ಅವರ ಮೊದಲ ಸೋದರಸಂಬಂಧಿ. ಕೊನಿಡೆಲ ನಾಗೇಂದ್ರ, ನಾಗ ಬಾಬು ಅವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಹೋದರರಾಗಿದ್ದಾರೆ. ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

ರಾಮ್ ಚರಣ್, ಉಪಾಸನಾ ಕೊನಿಡೇಲ, ಸಾಯಿ ಧರಮ್ ತೇಜ್, ಅಲ್ಲು ಸಿರಿಶ್, ಸುಶ್ಮಿತಾ ಕೊನಿಡೇಲ, ಶ್ರೀಜಾ ಕೊನಿಡೇಲ, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಸೇರಿದಂತೆ ಇಡೀ ಕೊನಿಡೇಲ ಕುಟುಂಬ ಅದ್ಧೂರಿಯಾಗಿ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲಿದೆ. ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಕೂಡ ಆಗಮಿಸುವ ನಿರೀಕ್ಷೆಯಿದೆ.

ಇತ್ತೀಚೆಗಷ್ಟೇ ಇಟಲಿಯ ರೋಮ್‌ನಿಂದ ವರುಣ್ ತೇಜ್ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಲಾವಣ್ಯ ಕೂಡ ತಾನು ಪ್ರಯಾಣಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Kamal Haasan: ಇಂಡಿಯನ್‌ 2 ಸಿನಿಮಾದಲ್ಲಿ ಸಿದ್ಧಾರ್ಥ್; ಕಮಲ್‌ ಜತೆ ಯಾವ ಪಾತ್ರದಲ್ಲಿ ಇವರ ಕಮಾಲ್‌?

2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ವರುಣ್‌ ತೇಜ್‌. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್‌2’, ‘ಎಫ್‌3’ ಥರದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ‘ಗಾಂಡೀವಧಾರಿ ಅರ್ಜುನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಲಾವಣ್ಯ ತ್ರಿಪಾಠಿ ‘ಅಂಡಲಾ ರಾಕ್ಷಸಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ನೀಡಿದರು. ಕೆಲ ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ಹ್ಯಾಪಿ ಬರ್ತ್‌ಡೇ’ ನಂತರ ಯಾವುದೇ ತೆಲುಗು ಸಿನಿಮಾಗಳಲ್ಲೂ ಲಾವಣ್ಯ ನಟಿಸುತ್ತಿಲ್ಲ.

Exit mobile version