Site icon Vistara News

Leo Movie: ಲಿಯೋ ಚಿತ್ರಕ್ಕೆ 13 ಬದಲಾವಣೆ ಸೂಚಿಸಿದ ಸೆನ್ಸಾರ್‌ ಬೋರ್ಡ್‌!

leo

leo

ಚೆನ್ನೈ: ದಳಪತಿ ವಿಜಯ್‌ ಅಭಿನಯದ ಬಹು ನಿರೀಕ್ಷಿತ ‘ಲಿಯೋ’ ಚಿತ್ರದ (Leo Movie) ಟ್ರೈಲರ್ ಅ. 4ರಂದು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಇದೇ ತಿಂಗಳು 19ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಬೋರ್ಡ್‌ (Censor Board) 13 ಕಡೆ ಬದಲಾವಣೆ ಸೂಚಿಸಿ ಯು/ಎ ಸರ್ಟಿಫಿಕೆಟ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವೈರಲ್‌ ಆದ ಸರ್ಟಿಫಿಕೆಟ್‌

ಸದ್ಯ ‘ಲಿಯೋ’ ಚಿತ್ರದ ಸರ್ಟಿಫಿಕೆಟ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ವೈರಲ್‌ ಆಗಿದೆ. ಇದರಲ್ಲಿ ಸಿಬಿಎಫ್‌ಸಿ(Central Board of Film Certification-CBFC) ಸೂಚಿಸಿದ 13 ಬದಲಾವಣೆಗಳ ಪಟ್ಟಿ ಇದೆ. ಅವಾಚ್ಯ ಶಬ್ದಗಳನ್ನು ಮ್ಯೂಟ್ ಮಾಡಲು ಚಿತ್ರತಂಡಕ್ಕೆ ನಿರ್ದೇಶನ ನೀಡಿರುವ ಜತೆಗೆ ಚಿತ್ರದಲ್ಲಿನ ಕೊಂಬಿನಿಂದ ಇರಿಯುವ ದೃಶ್ಯಗಳಿಗೆ ತಿದ್ದುಪಡಿ ಮಾಡುವಂತೆ ತಿಳಿಸಿದೆ. ಬದಲಾವಣೆ ಮತ್ತು ಕೆಲವು ದೃಶ್ಯಗಳ ಕಡಿತಗಳ ನಂತರ ʼಲಿಯೋʼ ಚಿತ್ರ 164 ನಿಮಿಷ (2 ಗಂಟೆ 44 ನಿಮಿಷಗಳು) ಇರಲಿದೆ.

ಹಿಟ್‌ ಕಾಂಬಿನೇಷನ್‌

ʼಮಾಸ್ಟರ್‌ʼ ಮೂಲಕ ಸೂಪರ್‌ ಹಿಟ್‌ ಚಿತ್ರ ನೀಡಿದ ಲೊಕೇಶ್‌ ಕನಕರಾಜ್‌ ಮತ್ತು ವಿಜಯ್‌ ʼಲಿಯೋʼ ಮೂಲಕ ಮತ್ತೊಮ್ಮೆ ಒಂದಾಗುತ್ತಾರೆ ಎನ್ನುವಾಗಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿತ್ತು. ಈಗಾಗಲೇ ʼಖೈದಿʼ, ʼವಿಕ್ರಮ್‌ʼನಂತಹ ಹಿಟ್‌ ಚಿತ್ರಗಳನ್ನು ನೀಡಿದ ಲೋಕೇಶ್‌ ʼಲಿಯೋʼದಲ್ಲಿಯೂ ಭರ್ಜರಿ ಫೈಟ್‌ ಸೀನ್‌ ಕ್ರಿಯೇಟ್‌ ಮಾಡಿರುವುದು ಟ್ರೈಲರ್‌ ಮೂಲಕ ಸಾಬೀತಾಗಿದೆ. ಅಲ್ಲದೆ ವಿಜಯ್‌ ಮತ್ತು ತ್ರಿಷಾ ಕೃಷ್ಣನ್‌ ಹಲವು ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಮೂಲಕ ಒಂದಾಗುತ್ತಿರುವುದು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಲು ಕಾರಣ. ಜತೆಗೆ ಅರ್ಜುನ್‌ ಸರ್ಜಾ, ಗೌತಮ್‌ ವಾಸುದೇವ್‌ ಮೆನನ್‌, ಪ್ರಿಯಾ ಆನಂದ್‌ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಬಾಲಿವುಡ್‌ ನಟ ಸಂಜಯ್‌ ದತ್‌ ʼಕೆಜಿಎಫ್‌ 2ʼ ಬಳಿಕ ದಕ್ಷಿಣದಲ್ಲಿ ಮತ್ತೊಂದು ಪವರ್‌ಫುಲ್‌ ಪಾತ್ರದ ಮೂಲಕ ಮಿಂಚಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ.

ಹಿಂಸಾಚಾರದ ಮೂಲಕ ಸ್ಥಳೀಯ ನಾಯಕನಾಗುವ ಸೌಮ್ಯ ಸ್ವಭಾವದ ಕೆಫೆ ಮಾಲಕನೊಬ್ಬನ ಸುತ್ತ ಈ ಚಿತ್ರ ಸುತ್ತುತ್ತದೆ ಎನ್ನುವುದನ್ನು ಟ್ರೈಲರ್ ಬಹಿರಂಗಪಡಿಸಿದೆ. ಗೌತಮ್‌ ವಾಸುದೇವ್‌ ಮೆನನ್‌ ಪೊಲೀಸ್‌ ಪಾತ್ರದಲ್ಲಿದ್ದರೆ ಸಂಜಯ್‌ ದತ್‌ ಖಳ ನಟನಾಗಿ ವಿಜಯ್‌ ಎದುರು ತೊಡೆ ತಟ್ಟಿದ್ದಾರೆ.

ಇದನ್ನೂ ಓದಿ: Leo Movie: ಲಿಯೋ ಟ್ರೈಲರ್ ಔಟ್… ವಿಜಯ್ ಅಭಿಮಾನಿಗಳಿಗೆ ಹಬ್ಬ! ಅ.19ಕ್ಕೆ ಸಿನಿಮಾ ರಿಲೀಸ್

ಈ ವರ್ಷಾರಂಭದಲ್ಲಿ ವಿಜಯ್‌ ʼವಾರಿಸುʼ ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದರು. ವಂಶಿ ಪೈಡಿಪಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ವಿಜಯ್‌ಗೆ ನಾಯಕಿಯಾಗಿದ್ದರು. ಈ ಫ್ಯಾಮಿಲಿ ಡ್ರಾಮ ಬಾಕ್ಸ್‌ ಆಫೀಸ್‌ನಲ್ಲಿ 300 ಕೋಟಿ ರೂ.ಗಿಂತ ಅಧಿಕ ಕಲೆಕ್ಟ್‌ ಮಾಡಿತ್ತು. ಇದೀಗ ವಿಜಯ್‌ ಮತ್ತೆ ʼಲಿಯೋʼ ಮೂಲಕ ಗೆಲುವಿನ ಓಟ ಮುಂದುವರಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version