Site icon Vistara News

Liger Movie | ಸೋತ ಲೈಗರ್‌: ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಕುಸಿತ, ನಿರ್ಮಾಪಕಿ ಚಾರ್ಮಿ ಕೌರ್ ಹೇಳಿದ್ದೇನು?

Liger Movie

ಬೆಂಗಳೂರು : ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ (Liger Movie) ವಿಶ್ವಾದ್ಯಂತ ಗುರುವಾರ (ಆ.25) ಬಿಡುಗಡೆಗೊಂಡಿತ್ತು. ಆದರೆ ಸಿನಿಮಾದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರಾಶೆಯನ್ನುಂಟು ಮಾಡಿದೆ. ಮೊದಲ ದಿನದಿಂದ ಚಿತ್ರಕ್ಕೆ ನೆಗೆಟಿವ್‌ ವಿಮರ್ಶೆಗಳು ಬರುತ್ತಿದ್ದು, ಚಿತ್ರಮಂದಿರಗಳಲ್ಲಿನ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಕಲೆಕ್ಷನ್‌ನಲ್ಲಿ ಭಾರಿ ಕುಸಿತ

ವರದಿಗಳ ಪ್ರಕಾರ, ಲೈಗರ್‌ ಭಾನುವಾರದಂದು ಸರಿಸುಮಾರು 5.50 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಚಿತ್ರಮಂದಿರದಲ್ಲಿ ನಾಲ್ಕನೇ ದಿನಕ್ಕೆ ಎಲ್ಲಾ ಭಾಷೆಗಳಲ್ಲಿ 5.50 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಚಿತ್ರ 50 ಕೋಟಿ ರೂ. ಗಡಿ ದಾಟದಿರುವುದು ಆತಂಕಕಾರಿ ಟ್ರೆಂಡ್ ಆಗಿದೆ. ಆಂಧ್ರ ಬಾಕ್ಸ್ ಆಫೀಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಲೈಗರ್‌ ಪ್ರಪಂಚದಾದ್ಯಂತ ಮೂರು ದಿನಗಳಲ್ಲಿ 43 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ | Liger Movie | ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌: ಷರಾ ಬರೆದ ಟ್ವಿಟ್ಟಿಗರು!

ತೆಲುಗು ಮತ್ತು ಹಿಂದಿ ಬೆಲ್ಟ್‌ಗಳಲ್ಲಿ ಲೈಗರ್‌ ಸಿನಿಮಾ ಕಳಪೆ ಪ್ರದರ್ಶನ ನೀಡಿದೆ. ಹಿಂದಿ ಬೆಲ್ಟ್‌ನಲ್ಲಿ ಕೇವಲ 4.60 ಕೋಟಿ ರೂ. ಗಳಿಸಿದೆ. ತೆಲುಗು ರಾಜ್ಯಗಳಲ್ಲಿ ಸುಮಾರು 12 ಕೋಟಿ ರೂ. ಗಳಿಸಿದೆ. ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ಕಂಡಿಲ್ಲ ಎನ್ನಲಾಗಿದ್ದು, ಯುಎಸ್‌ನಲ್ಲಿ ಕೇವಲ 2 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಲೈಗರ್‌ ವಿಶ್ವಾದ್ಯಂತ ಗಳಿಕೆಯು ಸುಮಾರು 21.3 ಕೋಟಿ ರೂ. ಆಗಿದೆ ಎನ್ನಲಾಗಿದೆ.

ನಿರ್ಮಾಪಕಿ ಚಾರ್ಮಿ ಕೌರ್ ಹೇಳಿದ್ದೇನು?
ನಿರ್ಮಾಪಕಿ ಚಾರ್ಮಿ ಕೌರ್ ಮಾತನಾಡಿ ʻʻಜನರು ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ಚಿತ್ರ ನೋಡಲು ಬಯಸುತ್ತಿದ್ದಾರೆ. ಇಡೀ ಕುಟುಂಬವು ಟಿವಿಯಲ್ಲಿ ಅತಿ ದೊಡ್ಡ ಬಜೆಟ್ ಚಲನಚಿತ್ರ ನೋಡಬಹುದು. ಹೀಗಾಗಿ ಜನರು ಥಿಯೇಟರ್‌ಗಳಿಗೆ ಬರುವುದಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆ ಎಂದು ಬಾಲಿವುಡ್‌ ಮಂದಿ ಹೇಳುತ್ತಿದ್ದಾರೆ. ಬಿಂಬಿಸಾರ, ಸೀತಾ ರಾಮಂ, ಮತ್ತು ಕಾರ್ತಿಕೇಯ 2 ಉತ್ತಮ ಪ್ರದರ್ಶನ ಕಾಣುತ್ತಿವೆ. ಹೀಗಾಗಿ ಜನ ಥಿಯೇಟರ್​​ಗೆ ಬರಲ್ಲ ಅನ್ನೋದು ಸುಳ್ಳು ಎಂದು ಬಾಲಿವುಡ್​ ಮಂದಿ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ

ಈ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಸೋಷಿಯಲ್‌ ಮೀಡಿಯಾಗಳಲ್ಲಿ ನೆಗೆಟಿವ್‌ ಕಮೆಂಟ್‌ಗಳು ಹೆಚ್ಚು ಬಂದಿದ್ದು, ಕಲೆಕ್ಷನ್‌ಗೆ ಬಹಳ ಪೆಟ್ಟು ಕೊಟ್ಟಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಧರ್ಮ ಪ್ರೊಡಕ್ಷನ್‌ನಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. ಪೋಸ್ಟರ್‌ಗಳಿಂದಲೇ ಲೈಗರ್‌ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅಲ್ಲದೆ, ಬಳಿಕ ಬಂದ ಟ್ರೈಲರ್‌ ಇದಕ್ಕೆ ಪುಷ್ಟಿ ನೀಡಿತ್ತು. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು, ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

ವಿಜಯ್‌ ದೇವರಕೊಂಡ ಇಷ್ಟು ದಿನ ರೊಮ್ಯಾಂಟಿಕ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಬಾಕ್ಸಿಂಗ್‌ನ ದಿಗ್ಗಜ ಮೈಕ್‌ ಟೈಸನ್‌ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ | Liger Movie | ನೆಗೆಟಿವ್ ಕಮೆಂಟ್‌ಗೆ ಮುಗ್ಗರಿಸಿತೇ ಲೈಗರ್‌: ಮೊದಲ ದಿನದ ಕಲೆಕ್ಷನ್ ಕಡಿಮೆಯಾಗಿದ್ದೇಕೆ?

Exit mobile version