ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES 2024) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೇ ತಿಂಗಳ 29ರಿಂದ ಮಾರ್ಚ್ 7ರವೆರೆಗ ಚಿತ್ರೋತ್ಸವ ನಡೆಯಲಿದೆ. 15ನೇ ಬೆಂಗಳೂರು ಸಿನಿಮೋತ್ಸವದಲ್ಲಿ ಕನ್ನಡ ಸೇರಿದಂತೆ ವಿಶ್ವದ ಹಲವು ಭಾಷೆಗಳ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜತೆಗೆ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗವೂ ಇದ್ದು, ಮೂರು ವಿವಿಧ ಸ್ಪರ್ಧಾ ವಿಭಾಗದಲ್ಲಿ ಹಲವು ಕನ್ನಡ ಸಿನಿಮಾಗಳು ಇತರೆ ಭಾಷೆಯ ಸಿನಿಮಾಗಳೊಟ್ಟಿಗೆ ಪ್ರಶಸ್ತಿಗಾಗಿ ಸೆಣೆಸಲಿವೆ.
ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾ ಕಣಕ್ಕಿಳಿಯುತ್ತಿವೆ. ಈ ಪೈಕಿ ಟಕ್ಕರ್ ಹಾಗೂ ರನ್ ಆಂಟೋನಿ ಖ್ಯಾತಿಯ ರಘು ಶಾಸ್ತ್ರೀ ನಿರ್ದೇಶನದ `ಲೈನ್ ಮ್ಯಾನ್’ ಸಿನಿಮಾ ಸ್ಪರ್ಧೆಗಿಳಿಯುತ್ತಿದೆ.
ತ್ರಿಗುಣ್ ನಾಯಕ ನಾಯಕನಾಗಿ ನಟಿಸಿರುವ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನದ ಜತೆಗೆ ಪ್ರಶಸ್ತಿಗಳ ಬೇಟೆಗಿಳಿದಿದೆ. ಭಿನ್ನ',
ಡಿಯರ್ ಸತ್ಯ’ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯಡಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ʻಲೈನ್ ಮ್ಯಾನ್ʼ ಚಿತ್ರಕ್ಕೆ ಹಣ ಹಾಕಿದ್ದಾರೆ.
ಇದನ್ನೂ ಓದಿ: Devara Movie: ಜ್ಯೂನಿಯರ್ ಎನ್‌ಟಿಆರ್ ‘ದೇವರ‘ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!
ಆರ್.ಜಿ.ವಿ ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಇದು ನಾಯಕನಾಗಿ ಚೊಚ್ಚಲ ಹೆಜ್ಜೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದ್ದಾರೆ.
ಹಳ್ಳಿ ಕಡೆ ದಿನಾ ಬೀದಿ ದೀಪ ಹಾಕುವ, ಆರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ ‘ಲೈನ್ ಮ್ಯಾನ್’ ಪಾತ್ರದಲ್ಲಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ. , ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರ ಚಂದಕವಾಡಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಮುಂದಿನ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ.