ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಟಿ ಅಭಿನಯ (Actress Abhinaya) ಹಾಗೂ ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಲುಕ್ಔಟ್ ನೋಟಿಸ್ ಬಿಡುಗಡೆ ಮಾಡಲಾಗಿದೆ. ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಡೆದ ವಿಚಾರಣೆಯಲ್ಲಿ ಅಭಿನಯ, ಸಹೋದರ ಚಲುವರಾಜು ಹಾಗೂ ತಾಯಿಗೆ ಶಿಕ್ಷೆಯಾಗಿತ್ತು. ಅಲ್ಲಿಂದ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾಹಿತಿ ಇದ್ದರೆ ಬೆಂಗಳೂರಿನ ಚಂದ್ರಾಲೇಔಟ್ನ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ನಟಿ ಅಭಿನಯ ಹಾಗೂ ಅವರ ಕುಟುಂಬಸ್ಥರು ತಮಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರ ಅತ್ತಿಗೆ 2012ರಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಅವರು ವೇಶ್ಯಾವಾಟಿಕೆ ಕೂಡ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದಲ್ಲಿ ಸೆಷೆನ್ಸ್ ಕೋರ್ಟ್ ಅಭಿನಯ ಹಾಗೂ ಇತರರು ತಪ್ಪಿತಸ್ಥರು ಎಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅಭಿನಯ ಹಾಗೂ ಅವರ ಸಹೋದರ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಅವರಿಗೆ ಸೋಲಾಗಿತ್ತು. ಸೆಷನ್ಷ್ ಕೋರ್ಟ್ನ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಶಿಕ್ಷೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪೊಲೀಸರು ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚಲುವರಾಜು ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಬೇಕಾಗಿತ್ತು. ಆದರೆ ಅವರು ನಾಪತ್ತೆಯಾಗಿರುವ ಕಾರಣ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: Dowry harassment | ʻಅನುಭವʼ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು, 20 ವರ್ಷ ಹಿಂದಿನ ವರದಕ್ಷಿಣೆ ಪ್ರಕರಣ
1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರ ಜತೆ ಲಕ್ಷ್ಮೀ ದೇವಿ ವಿವಾಹವಾಗಿದ್ದರು. ಈ ವೇಳೆ ವರದಕ್ಷಿಣೆ ನೀಡಲಾಗಿತ್ತು ಹಾಗೂ ನಂತರವೂ ಅಭಿನಯ ಸೇರಿದಂತೆ ಕುಟುಂಬಸ್ಥರು ಹೆಚ್ಚಿನ ಹಣಕ್ಕಾಗಿ ಪೀಡಿಸಿದ್ದರು. ಈ ಬಗ್ಗೆ 2012ರಲ್ಲಿ ದೂರು ದಾಖಲಾಗಿತ್ತು. ಮೊದಲಿಗೆ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಅಭಿನಯ ಕುಟುಂಬದವರು ಪ್ರಶ್ನಿಸಿದ್ದರು. ಅಲ್ಲೂ ಅವರಿಗೆ ಸೋಲಾಗಿದೆ.