ಬೆಂಗಳೂರು: ʻಜಗವೇ ನೀನು ಗೆಳತಿಯೆʼ ಹಾಡಿನ ಮೂಲಕ ಸದ್ದು ಮಾಡಿರುವ ಲವ್ 360 ಸಿನಿಮಾ (Love 360) ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಆದರೆ ಸಿನಿಮಾ ಕಟೆಂಟ್ ಹಿಟ್ ಆಗಿದ್ದರೂ ಕಲೆಕ್ಷನ್ ಪ್ಲಾಪ್ ಆಗಿದೆ ಎನ್ನಲಾಗುತ್ತಿದೆ. ಇದೀಗ ವಿಡಿಯೊ ಮೂಲಕ ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
ಸಿನಿಮಾ ಬಿಡುಗಡೆಯಾಗಿ ಕೇವಲ ಮೂರು ದಿನಗಳಾಗಿವೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುತ್ತಿಲ್ಲ ಎಂದು ನಿರ್ದೇಶಕ ಶಶಾಂಕ್ ಹೇಳಿಕೊಂಡಿದ್ದಾರೆ. ʻʻಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಮಾತ್ರ ಈ ಚಿತ್ರ ನಿರೀಕ್ಷೆಯಷ್ಟು ಕಲೆಕ್ಷನ್ ಮಾಡಿದೆ. ಆದರೆ ಉಳಿದ ಕಡೆ ಹೊಸಬರ ಸಿನಿಮಾ ಎಂದು ಥಿಯೇಟರ್‌ಗೆ ಬರಲು ಜನ ಹಿಂಜರಿಯುತ್ತಿದ್ದಾರೆ. ದಯವಿಟ್ಟು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ. ನಿರ್ಮಾಪಕರನ್ನು ಉಳಿಸಿʼʼ ಎಂದು ವಿಡಿಯೊ ಮೂಲಕ ಶಶಾಂಕ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Love 360 | ಲವ್ 360 ಸಿನಿಮಾ ಟ್ರೈಲರ್ ರಿಲೀಸ್, ಹ್ಯಾಟ್ರಿಕ್ ಹೀರೋ ಮೆಚ್ಚುಗೆ
ಭಾನುವಾರ (ಆ.21) ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯನ್ನು ಚಿತ್ರತಂಡ ಹೊಂದಿತ್ತು. ಇದೀಗ ಥಿಯೇಟರ್ ಕಡೆಗೆ ಜನರು ಬರದೇ ಇದ್ದದ್ದಕ್ಕೆ ಶಶಾಂಕ್ ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟ ಪ್ರವೀಣ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಗ್ಧತೆ ಹಾಗೂ ಪ್ರೀತಿಯ ಕಥಾ ಹಂದರ ಹೊಂದಿರುವಂತೆ ಇದೆ ಈ ಸಿನಿಮಾ. ಶಶಾಂಕ್ ಈ ಹಿಂದೆ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ʻಮೊಗ್ಗಿನ ಮನಸುʼ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.