Site icon Vistara News

M.M.Keeravani: ʼರಂಗಸಮುದ್ರ‌ʼ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ ಕೀರವಾಣಿ

keeravani

keeravani

ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹೊಸಬರ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿವೆ. ಪ್ರತಿಭಾನ್ವಿತ ನಿರ್ದೇಶಕರು ವಿಭಿನ್ನ ಕಥೆಗಳೊಂದಿಗೆ ತೆರೆ ಮೇಲೆ ಮ್ಯಾಜಿಕ್‌ ಮಾಡುತ್ತಿದ್ದಾರೆ. ಈ ಸಾಲಿಗೆ ಸೇರುವ ಚಿತ್ರ ʼರಂಗಸಮುದ್ರ‌ʼ (Rangasamudra). ಹೊಯ್ಸಳ ಕೊಣನೂರು ನಿರ್ಮಾಣ ಮಾಡಿ, ರಾಜ್‌ಕುಮಾರ್ ಅಸ್ಕಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಶೇಷ ಎಂದರೆ ʼಬಾಹುಬಲಿʼ, ʼಆರ್‌ಆರ್‌ಆರ್‌ʼ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ (M.M.Keeravani) ಟ್ರೈಲರ್‌ ವೀಕ್ಷಿಸಿ ಚಿತ್ರತಂಡಕ್ಕೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ʼರಂಗಸಮುದ್ರ‌ʼ ಚಿತ್ರದ ಟ್ರೈಲರ್‌ ಅನ್ನು ಹಂಚಿಕೊಂಡಿರುವ ಕೀರವಾಣಿ, ʼʼಆಸಕ್ತಿದಾಯಕವಾದ ವಿಚಾರವೊಂದು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆʼʼ (Something interesting is coming up) ಎಂದು ಬರೆದುಕೊಂಡಿದ್ದಾರೆ. ಜತೆಗೆ ನಿರ್ದೇಶಕ ರಾಜ್ ಕುಮಾರ್ ಅಸ್ಕಿ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಉತ್ತಮ ಸಂಗೀತಕ್ಕಾಗಿ ಎರಡು ಬಾರಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಎಂ.ಎಂ.ಕೀರವಾಣಿ ಸ್ವತಃ ಮೆಚ್ಚುಗೆ ಸೂಚಿಸಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಬಹು ತಾರಾಗಣ

ಶೀರ್ಷಿಕೆ, ಟ್ರೈಲರ್‌ನಿಂದಲೇ ಕುತೂಹಲ ಮೂಡಿಸಿರುವ ʼರಂಗಸಮುದ್ರ‌ʼದಲ್ಲಿ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ಕುಮಾರ್ ಮುಂತಾದ ಖ್ಯಾತ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಫೋಟೊ ಮುಂದೆ ಕೂತ ರಾಘವೇಂದ್ರ ರಾಜ್ ಕುಮಾರ್ ಅದರ ಮೇಲೆ ಕೈಯಾಡಿಸುವ ದೃಶ್ಯದ ಮೂಲಕ ಟ್ರೈಲರ್ ಆರಂಭವಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅಭಿನಯಿಸಬೇಕಿತ್ತು. ಕಥೆ ಕೇಳಲು ಅವರು ಸಮಯ ಕೊಟ್ಟಿದ್ದರಂತೆ.

ಇದನ್ನೂ ಓದಿ: Vijay Raghavendra: ವಿಜಯ ರಾಘವೇಂದ್ರ ಅಭಿನಯದ ಕ್ರೈಂ ಥ್ರಿಲ್ಲರ್ ʼಕೇಸ್ ಆಫ್ ಕೊಂಡಾಣʼ ಬಿಡುಗಡೆಗೆ ಸಿದ್ಧ

ʼʼಸಾಹುಕಾರ ನಿಮ್ಮ ಅನ್ನ ಕಿತ್ತುಕೊಳ್ಳಬಹುದು, ನಿಮ್ಮ ದುಡಿಮೆ ಕಿತ್ತುಕೊಳ್ಳಬಹುದು, ನಿಮ್ಮ ಕಿಮ್ಮತ್ತಿಗೂ ಕೈ ಹಾಕಬಹುದು. ಆದರೆ ನಿಮ್ಮಲ್ಲಿರುವ ವಿದ್ಯೆಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲʼʼ ಎಂದು ಹೇಳುವ ಮೂಲಕ ರಾಘವೇಂದ್ರ ರಾಜ್‌ಕುಮಾರ್‌ ಶಿಕ್ಷಣದ ಮಹತ್ವ ಸಾರಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ. ಜತೆಗೆ ಈ ಸಿನಿಮಾ ಪಾಪ ಪುಣ್ಯದ ವಿಮರ್ಶೆ ನಡುವೆ ಮನುಷ್ಯತ್ವದ ಸಂದೇಶ ಸಾರಲಿದೆ. ಮಾತ್ರವಲ್ಲ ಶಿಕ್ಷಕರೊಬ್ಬರು, ʼʼಇಲ್ಲಿ ಮನುಷ್ಯನಿಗೆ ಬೆಲೆ ಇಲ್ಲ. ಮಾನವೀಯತೆಗೆ ಬೆಲೆ ಇಲ್ಲ. ಅವನ ಬಳಿ ಇರುವ ವಸ್ತುಗಳಿಗೆ ಮಾತ್ರ ಬೆಲೆʼʼ ಹೇಳುವ ಸಂಭಾಷಣೆಯೂ ಕಂಡು ಬಂದಿದ್ದು, ಬಡವ-ಶ್ರೀಮಂತರ ಮಧ್ಯೆ ನಡುವೆ ಸಂಘರ್ಷದ ಬಗ್ಗೆಯೂ ಕಥೆ ಬೆಳಕು ಚೆಲ್ಲಲಿದೆ ಎನ್ನುವುದರ ಸೂಚನೆ ಸಿಕ್ಕಿದೆ. ಜತೆಗೆ ಕಾರಿದ್ದರೆ ಮಾತ್ರ ಮನುಷ್ಯ ದೊಡ್ಡವನಾಗುತ್ತಾನ? ಎನ್ನುವ ಹುಡುಗನ ಪ್ರಶ್ನೆಯೂ ಸಾಮಾಜಿಕ ಪಿಡುಗಿನ ಬಗ್ಗೆ ಚಿತ್ರ ಮಾತನಾಡಲಿದೆ ಎನ್ನುವುದನ್ನು ಸೂಚಿಸುತ್ತದೆ. ಉತ್ತರ ಕರ್ನಾಟಕದ ಭಾಷೆಯನ್ನು ಉತ್ತಮವಾಗಿ ಬಳಸಿರುವುದೂ ಕಂಡು ಬಂದಿದೆ. ಒಟ್ಟಿನಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರ ಜನವರಿ 12ರಂದು ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version