ಬೆಂಗಳೂರು : ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಸಿನಿಮಾಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ತಯಾರಾಗಿರುವ ವರ್ಚುವಲ್ ಸಿನಿಮಾ ‘ಮೇಡ್ ಇನ್ ಚೈನಾ’ ಜೂನ್ 17ರಂದು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ.
ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ನಟಿಸಿರುವ ಈ ಚಿತ್ರ ಆರಂಭದಿಂದ ಹಿಡಿದು ಕೊನೆವರೆಗೂ ವಿಡಿಯೋ ಕಾಲ್ ಮೂಲಕವೇ ನಡೆಯಲಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.
ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತದೆ. ಆತ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖದ ಕಂಟೆಂಟ್ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್
ಅಯೋಗ್ಯ, ಚಮಕ್, ರತ್ನಮಂಜರಿ ಸಿನಿಮಾಗಳಿಗೆ ಛಾಯಾಗ್ರಾಹಕ ಕೆಲಸ ಮಾಡಿದ್ದ ಪ್ರೀತಮ್ ತೆಗ್ಗಿನಮನೆ ಸ್ವತಂತ್ರ ನಿರ್ದೇಶಕರಾಗಿ ಮೇಡ್ ಇನ್ ಚೈನಾ ಮೂಲಕ ಬಡ್ತಿ ಪಡೆದಿದ್ದು, ನಿರ್ದೇಶನದ ಜತೆಗೆ ಗ್ರಾಫಿಕ್, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್ ನಿಭಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪ್ರೀತಮ್, “ಮಲಯಾಳಂನಲ್ಲಿ ‘ಸೀ ಯೂ ಸೂನ್’ ಹಾಗೂ ಬಾಲಿವುಡ್‌ನಲ್ಲಿ ‘ಸರ್ಚಿಂಗ್’ ಎನ್ನುವ ವರ್ಚುವಲ್ ಸಿನಿಮಾಗಳು ಬಂದಿದ್ದವು. ಇವರೆಡೂ ಸಿನಿಮಾಗಳು ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತವಾದುವು. ಆದರೆ ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ʼ ಎಂದರು.
ಟಿ.ಎಸ್.ಚಂದ್ರಶೇಖರ್, ಕ್ರಿಸ್ಟಲ್ ಪಾರ್ಕ್ ಸಂಸ್ಥೆ ಹೊಸ ಹೊಸ ತಂತ್ರಜ್ಞರಿಗೆ ಅವಕಾಶ ನೀಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಮೇಡ್ ಇನ್ ಚೈನಾ ಆಗಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇದು ಪ್ರಥಮ ಬಾರಿ ವರ್ಚುವಲ್ ಆಗಿ ತಯಾರಾಗಿರುವ ಕನ್ನಡದ ಮೊದಲ ಚಿತ್ರ. ಪ್ರೀತಮ್ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಲವಾರು ಪ್ರಥಮಗಳಿಗೆ ಈ ಸಿನಿಮಾ ಸಾಕ್ಷಿಯಾಗಿದೆ. ಹಾಲಿವುಡ್ ಹಾಗೂ ಮಾಲಿವುಡ್‌ನಲ್ಲಿ ವರ್ಚುವಲ್ ಸಿನಿಮಾ ಯಶಸ್ವಿಯಾಗಿದ್ದು, ಕನ್ನಡದಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ. ಇದೇ ತಿಂಗಳ 17ಕ್ಕೆ ರಾಜ್ಯಾದ್ಯಂತ ಕೇವಲ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ತಿಳಿಸಿದರು.
ಮೇಡ್ ಇನ್ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.
ಇದನ್ನೂ ಓದಿ | Director ಉಪೇಂದ್ರ Returns: ಪಾನ್ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ