ಬೆಂಗಳೂರು: ಎಂಭತ್ತರ ದಶಕದಲ್ಲಿ ಡಾ. ರಾಜ್ಕುಮಾರ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಸೇರಿದಂತೆ ಅನೇಕ ದಿಗ್ಗಜರ ಜತೆ ತೆರೆ ಹಂಚಿಕೊಂಡಿದ್ದ ಹಿರಿಯ ನಟಿ ಮಹಾಲಕ್ಷ್ಮೀ (mahalakshmi actress) ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. `ಬಡ್ಡಿ ಬಂಗಾರಮ್ಮ’ (Baddi Bangaramma), ‘ಸ್ವಾಭಿಮಾನ'(swabhimana), ‘ಮದುವೆ ಮಾಡು ತಮಾಷೆ ನೋಡು’ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ನಟಿ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸುಮಾರು 30 ವರ್ಷಗಳಿಂದ ನಟನೆಯಿಂದ ಹಿಂದೆ ಉಳಿದಿದ್ದ ಮಹಾಲಕ್ಷ್ಮಿ ‘ಕಾವೇರಿ ಕನ್ನಡ ಮೀಡಿಯಂ’ (Kaveri Kannada Medium) ಧಾರಾವಾಹಿಗೆ ಸಾಥ್ ಕೊಟ್ಟಿದ್ದಾರೆ.
ಮಹಾಲಕ್ಷ್ಮೀ ಅವರ ಮೂಲ ತಮಿಳುನಾಡು ಆಗಿದ್ದರೂ, ಕನ್ನಡದಲ್ಲೇ ಹೆಚ್ಚು ಯಶಸ್ಸು ಸಿಕ್ಕಿತ್ತು. ನಟಿ ಈಗ ಕಾವೇರಿ ಕನ್ನಡ ಮೀಡಿಯಂನಲ್ಲಿ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯ ಒಡತಿ, ಶಿಸ್ತಿನ ಅಜ್ಜಿಯಾಗಿ ಮಹಾಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಪಾತ್ರದ ಬಗ್ಗೆ ವಾಹಿನಿ ಇನ್ನಷ್ಟೇ ಪ್ರೋಮೋ ರಿವೀಲ್ ಮಾಡಲಿದೆ. 1991ರಲ್ಲಿ ತೆರೆಕಂಡ ‘ಅಂತರಂಗದ ಮೃದಂಗ’ ಚಿತ್ರದ ಬಳಿಕ ಯಾವುದೇ ಕನ್ನಡ ಚಿತ್ರದಲ್ಲಿ ಮಹಾಲಕ್ಷ್ಮೀ ನಟಿಸಲಿಲ್ಲ. ಇದೀಗ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರ
ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ ‘ಕಾವೇರಿ ಕನ್ನಡ ಮೀಡಿಯಂ’ ಇದೇ ಆಗಸ್ಟ್ 28ರಿಂದ ರಾತ್ರಿ 7.30 ಕ್ಕೆ ಪ್ರಸಾರ ಆಗುತ್ತದೆ. ಮಹಾಲಕ್ಷ್ಮೀ ಅವರ ಪಾತ್ರ ಬಹಳ ಖಡಕ್. ಕಾವೇರಿಗೆ ಸದಾ ಬೆಂಬಲವಾಗಿ ನಿಲ್ಲುವ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ .’ಕಾವೇರಿ ಕನ್ನಡ ಮೀಡಿಯಂ’ ಮೊದಲ ಎಪಿಸೋಡ್ನಲ್ಲಿ ಮಹಾಲಕ್ಷ್ಮಿ ಇರುವುದಿಲ್ಲ. ಎರಡನೇ ಎಪಿಸೋಡ್ನಿಂದ ಕಾಣಿಸಿಕೊಳ್ಳುತ್ತಾರೆ ಎಂದು ವಾಹಿನಿ ಹೇಳಿಕೊಂಡಿದೆ.
ಕನ್ನಡ ಬರೀ ಭಾಷೆ ಅಲ್ಲ ಬದುಕು ಎಂದು ನಂಬಿಕೊಂಡ ಊರಿನಲ್ಲಿ ಹುಟ್ಟಿರುವ ಕಾವೇರಿ ಹೆಣ್ಣು ಮಗಳ ಕಥೆಯಿದು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕಾವೇರಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ, ಅದರ ಅಭಿವೃದ್ದಿಗೆ ಹೊರಡುವ ಕಾವೇರಿ ಕಥೆಯಿದು. ಕಾವೇರಿ ಪಾತ್ರದಲ್ಲಿ ಪ್ರಿಯ ಜೆ ಆಚಾರ್ ನಟಿಸುತ್ತಿದ್ದಾರೆ. ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ.
ಕಥಾ ನಾಯಕ ಅಗಸ್ತ್ಯ ಭಾರತದಲ್ಲಿಯೇ ಉತ್ತಮ ಆಂಗ್ಲ ಮಾಧ್ಯಮ ಶಾಲೆಯ ಓನರ್. ಈತನಿಗೆ ಆತನ ಶಾಲೆ ಅಭಿವೃದ್ಧಿ ಆಗಬೇಕು ವಿನಃ ಬೇರೆ ಯಾವುದು ಆತನ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಕನ್ನಡ ಶಾಲೆಯನ್ನು ಉಳಿಸುವ ಸಲುವಾಗಿ ಅಗಸ್ತ್ಯ ನೀಡಿರುವ ಸವಾಲನ್ನು ಸ್ವೀಕರಿಸಿ, ಕಾವೇರಿ 6 ತಿಂಗಳುಗಳ ಕಾಲ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾಳೆ. ಇವರಿಬ್ಬರ ಉದ್ದೇಶ ಒಂದೇ ಆಗಿದ್ದರೂ ಅನುಸರಿಸುವ ದಾರಿಗಳು ಮಾತ್ರ ಬೇರೆ ಬೇರೆ.
ಇದನ್ನೂ ಓದಿ: Seetha Rama Serial: ಪ್ರೇಕ್ಷಕರ ಅಚ್ಚುಮೆಚ್ಚಿನ `ಸೀತಾ ರಾಮ’ ಧಾರಾವಾಹಿಯ ಸಿಹಿ ಕನ್ನಡದವಳಲ್ಲ!
ನಟಿ ಮಹಾಲಕ್ಷ್ಮೀ ಮತ್ತೆ ಕಮ್ ಬ್ಯಾಕ್ ಆಗಿದ್ದಕ್ಕೆ ಅವರ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. ಈ ಮೊದಲು ನಟಿಯ ಬಗ್ಗೆ ನೂರೆಂಟು ಕಥೆಗಳು ಹುಟ್ಟಿಕೊಂಡಿದ್ದವು. ಅಧ್ಯಾತ್ಮದ ಕಡೆಗೆ ನಟಿ ವಾಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬಂತಹ ಸುದ್ದಿ ಹರಿದಾಡಿದ್ದವು.