ಬೆಂಗಳೂರು: ಟಾಲಿವುಡ್ ನಟ ಮಹೇಶ್ ಬಾಬು (Mahesh Babu ) ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಜನುಮದಿನ ಪ್ರಯುಕ್ತ ತಮ್ಮ 28ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೈಟಲ್ ಅನ್ನು ಅನಾವರಣಗೊಳಿಸಿದ್ದಾರೆ. ಪೋಸ್ಟರ್ ನೋಡುವಾಗಲೇ ಮಹೇಶ್ ಬಾಬು ಫ್ಯಾನ್ಸ್ ಸಖತ್ ಖಾರವಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಲುಕ್‌ಗೆ ತಕ್ಕಂತೆ ಸಿನಿಮಾಗೂ ಖಡಕ್ ಹೆಸರನ್ನೇ ಇಡಲಾಗಿದೆ. ‘ಗುಂಟೂರು ಖಾರಂ’ (Guntur Kaaram) ಎಂದು ಖಾರವಾದ ಟೈಟಲ್ ಅನ್ನೇ ಇಡಲಾಗಿದೆ. ಇಷ್ಟು ದಿನ ಎಸ್ಎಸ್ಎಂಬಿ28 ಎಂದು ಕರೆಯಲಾಗುತ್ತಿದ್ದ ಈ ಸಿನಿಮಾಕ್ಕೆ ಇನ್ನು ಮುಂದೆ ಗುಂಟೂರು ಖಾರಂ ಎಂದು ಹೆಸರು.
ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಕೆಂಪು ಬಣ್ಣದ ಚೌಕವುಳ್ಳ ಶರ್ಟ್ ಧರಿಸಿ ಹಣೆಗೆ ಕೆಂಪು ಪಟ್ಟಿ ಕಟ್ಟಿಕೊಂಡು ಬೀಡಿ ಸೇದುತ್ತಿದ್ದಾರೆ. ಇದರಲ್ಲಿ ಸಿನಿಮಾದ ಹೆಸರನ್ನೂ ರಿವೀಲ್ ಮಾಡಲಾಗಿದೆ. ಸಿನಿಮಾದ ಹೊಸ ಪೋಸ್ಟರ್ ಅನ್ನು ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ʻಮಹರ್ಷಿʼ ಸಿನಿಮಾ ನಂತರ ಮತ್ತೆ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಜಗಪತಿ ಬಾಬು ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ. ಎಸ್. ಥಮನ್ ಸಂಗೀತ ಸಂಯೋಜನೆ ಇದೆ.
2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್. ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: Mahesh Babu : ಮಹೇಶ್ ಬಾಬು 28ನೇ ಚಿತ್ರದ ಮಾಸ್ ಲುಕ್ ಪೋಸ್ಟರ್ ಔಟ್!
ಎಸ್ಎಸ್ ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಮ್ಯಾನರಿಸಂ ಬದಲು!
ಇದರ ನಂತರ, ಮಹೇಶ್ ಬಾಬು RRR ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜತೆ ಸಿನಿಮಾ ಮಾಡಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.
ರಾಜಮೌಳಿ ಸಿನಿಮಾಗೆ ಮಹೇಶ್ ಬಾಬು ಅವರ ಲುಕ್ ಮತ್ತು ಮ್ಯಾನರಿಸಂ ಬದಲಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಭರದಿಂದ ಸಾಗಿದ್ದು, ಡೈನಾಮಿಕ್ ಜೋಡಿ ತೆರೆ ಮೇಲೆ ಬರುವುದನ್ನು ಸಿನಿಪ್ರಿಯರು ಕಾಯುತ್ತಿದ್ದಾರೆ. ರಾಜಮೌಳಿ ಜತೆಗಿನ ಈ ಚಿತ್ರ ಮಹೇಶ್ ಬಾಬು 29ನೇ ಸಿನಿಮಾ ಆಗಿದೆ. ತಾತ್ಕಾಲಿಕವಾಗಿ SSMB29 ಹೆಸರು ನೀಡಲಾಗಿದೆ. ಮತ್ತು ಈ ಬಾರಿ ಈ ಸಿನಿಮಾದಲ್ಲಿ ಆರ್‌ಆರ್‌ಆರ್‌ಗಿಂತ ಹೆಚ್ಚು ವಿಎಫ್‌ಎಕ್ಸ್ ಬಳಸಲಿದ್ದಾರೆ ಎನ್ನಲಾಗುತ್ತಿದೆ.
ರಾಜಮೌಳಿ, ಕೆ.ಎಲ್. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ರಾಜಮೌಳಿ -ಮಹೇಶ್ ಬಾಬು ಕಾಂಬಿನೇಷನ್ ಚಿತ್ರದಲ್ಲಿ ಚಿತ್ರೀಕರಣಕ್ಕೆ ಕಾಡಿನಲ್ಲಿ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಹೆಚ್ಚಾಗಿ ರಾಜಮೌಳಿ ಅರಣ್ಯದಲ್ಲೇ ಹೆಚ್ಚು ಚಿತ್ರೀಕರಣ ಮಾಡುತ್ತಾರೆ. ಇದರಿಂದಾಗಿ ಜನರಿಗೆ ಇನ್ನೂ ಕ್ರೇಜ್ ಹೆಚ್ಚಾಗಿದೆ.