ಹೈದರಾಬಾದ್: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯಲ್ಲಿರುವ ನಟ ಮಹೇಶ್ ಬಾಬು(Mahesh Babu). ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿಲ್ಲವಾದರೂ ಸ್ಥಳೀಯವಾಗಿ ಅವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗವಿದ್ದು, ಅವರ ಸಿನಿಮಾವೆಲ್ಲವೂ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳುತ್ತಿವೆ. ಅದೇ ಹಿನ್ನೆಲೆಯಲ್ಲಿ ನಟ ತಮ್ಮ ಸಂಭಾವನೆಯನ್ನೂ ಏರಿಸಿಕೊಂಡಿದ್ದು, ಮುಂಬರುವ ʼಗುಂಟೂರು ಖಾರಂʼ ಸಿನಿಮಾಗಾಗಿ ಬರೋಬ್ಬರಿ 78 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹೌದು. ಮಹೇಶ್ ಬಾಬು ಅವರು ಕೊನೆಯದಾಗಿ ನಟಿಸಿದ ʼಸರ್ಕಾರು ವಾರಿ ಪಾಟʼ ಸಿನಿಮಾ ಕೂಡ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ತ್ರಿವಿಕ್ರಮ್ ಅವರು ನಿರ್ದೇಶನ ಮಾಡುತ್ತಿರುವ ʼಗುಂಟೂರು ಖಾರಂʼ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ 78 ಕೋಟಿ ರೂ. ಸಂಭಾವನೆ ಕೇಳಿದರಂತೆ. ಅಂದ ಹಾಗೆ ಈ ಗುಂಟೂರು ಖಾರಂ ಸಿನಿಮಾವನ್ನು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: Siddharth Mahesh: ಹೊಸ ಹೆಜ್ಜೆ ಇಟ್ಟ ಗರುಡ ಹೀರೊ ಸಿದ್ದಾರ್ಥ್ ಮಹೇಶ್!
ಗುಂಟೂರು ಖಾರಂ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಜತೆಯಲ್ಲಿ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಪೂಜಾ ಹೆಗ್ಡೆ ಅವರನ್ನು ಈ ಸಿನಿಮಾದ ನಾಯಕ ನಟಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಆಗಾಗ ಬದಲಾವಣೆ ಆಗುತ್ತಿದ್ದ ಕಾರಣಕ್ಕೆ ಪೂಜಾ ಹೆಗ್ಡೆ ಅವರು ಈ ಸಿನಿಮಾದಿಂದ ಹೊರನಡೆದರು. ನಂತರ ಅವರ ಬದಲಾಗಿ ಮೀನಾಕ್ಷಿ ಚೌಧರಿ ಅವರನ್ನು ಸಿನಿಮಾಕ್ಕೆ ಕರೆತರಲಾಗಿದೆ.
ಈ ಸಿನಿಮಾವನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ ಚಿತ್ರೀಕರಣದ ವೇಳೆ ಹಲವಾರು ವಿರಾಮಗಳು ಇದ್ದಿದ್ದರಿಂದಾಗಿ ಬಿಡುಗಡೆ ದಿನಾಂಕ ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ. ಮಹೇಶ್ ಬಾಬು ಅವರು ತನ್ನ ತಂದೆ ಶಿವ ರಾಮ ಕೃಷ್ಣ ಅವರ ಜನ್ಮ ದಿನೋತ್ಸವದಂದು ಸಿನಿಮಾದ ಪೋಸ್ಟರ್ ಹಾಗೂ ಸಣ್ಣದೊಂದು ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.