ಬೆಂಗಳೂರು: ಮಲಯಾಳಂ ಖ್ಯಾತ ನಿರ್ದೇಶಕ ಸಿದ್ದಿಕಿ (Siddique Director) ಅವರು ಆಗಸ್ಟ್ 8ರಂದು ನಿಧನರಾದರು. ಸಿದ್ದಿಕಿ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆಗಸ್ಟ್ 8ರಂದು ಹೃದಯಾಘಾತವಾಗಿತ್ತು ಎಂದು ಮೂಲಗಳು ತಿಳಿಸಿವೆ. ನಿರ್ದೇಶಕರ ಅಂತ್ಯಕ್ರಿಯೆ ಆಗಸ್ಟ್ 9ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದು ಎಎನ್‌ಐ ವರದಿ ಮಾಡಿದೆ. ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ನಿರ್ದೇಶಕ ಸಿದ್ಧಿಕಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ಅವರಿಗೆ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ.
ಹಿರಿಯ ನಟ ಮಮ್ಮುಟ್ಟಿ ಅವರು ಟ್ವೀಟ್ ಮಾಡಿ “ಬಹಳ ಆತ್ಮೀಯರಾಗಿದ್ದರು. ಆತ್ಮೀಯ ಸಿದ್ದಿಕಿ ಅವರಿಗೆ ನಮನಗಳು.”ಎಂದು ಬರೆದುಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಟ್ವೀಟ್ ಮಾಡಿ ʻʻಸೌಮ್ಯ ಆತ್ಮ. ಒಬ್ಬ ಪ್ರತಿಭಾನ್ವಿತ ಬರಹಗಾರ/ನಿರ್ದೇಶಕ. ಅವರು ನಮಗೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದರು. ಸಿದ್ಧಿಕಿ ಸರ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ದೇವರು ಶಕ್ತಿ ಕೊಡಲಿʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Heart Failure: ಹೃದಯಾಘಾತ, ಪೆಪ್ಪರ್‌ಫ್ರೈನ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನ
1986ರಲ್ಲಿ ತೆರೆಕಂಡ ‘ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್’ ಸಿನಿಮಾಗೆ ಚಿತ್ರಕತೆ ಬರೆಯುವುದರೊಂದಿಗೆ ಸಿನಿ ಪಯಣ ಆರಂಭಿಸಿದ ಸಿದ್ದಿಕಿ, 1989ರಲ್ಲಿ ಬಿಡುಗಡೆಯಾದ ‘ರಾಮ್‌ಜಿ ರಾವ್ ಸ್ಟೀಕಿಂಗ್’ ಸಿನಿಮಾ ಮೂಲಕ ನಿರ್ದೇಶಕರಾದರು. ಅವರು ನಿರ್ದೇಶನ ಮಾಡಿರುವ ಕೊನೇ ಸಿನಿಮಾ ‘ಬಿಗ್ ಬ್ರದರ್’ 2020ರಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ವು ಸಿದ್ದಿಕಿ ನಿರ್ದೇಶನದ ‘ಬಾಡಿಗಾರ್ಡ್’ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ಅವರು ತಮಿಳಿನಲ್ಲಿ ವಿಜಯ್ ಜತೆಗೂಡಿ ‘ಕಾವಲನ್’ ಮತ್ತು ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಅದೇ (ಬಾಡಿಗಾರ್ಡ್) ಹೆಸರಿನಲ್ಲಿ ನಿರ್ದೇಶನ ಮಾಡಿದ್ದರು. ಬಳಿಕ ಈ ಚಿತ್ರ ಕನ್ನಡದಲ್ಲೂ ತಯಾರಾಯಿತು. ನಟ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿದ್ದರು.