ಬೆಂಗಳೂರು : 2022ರಲ್ಲಿ ಬಿಡುಗಡೆಯಾದ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಅವರ ʻಜನ ಗಣ ಮನʼ ಸಿನಿಮಾದ ನಟಿ ಮಮತಾ ಮೋಹನ್ ದಾಸ್ (Mamta Mohandas) ಅವರಿಗೆ ವಿಟಲಿಗೋ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ನಟಿಯೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಸಮಂತಾ ರುತ್ ಪ್ರಭು ನಂತರ ತನಗೆ ಆಟೋಇಮ್ಯೂನ್ ಕಾಯಿಲೆ ಇದೆ ಎಂದು ಬಹಿರಂಗಪಡಿಸಿದ ಎರಡನೇ ನಟಿ ಇವರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮಮತಾ ಅವರಿಗೆ ಕ್ಯಾನ್ಸರ್ ಮರುಕಳಿಸಿತ್ತು. ಮಮತಾ ಅವರು ಕ್ಯಾನ್ಸರ್ ನಿಂದ ಗೆದ್ದು ಬಂದ ಮಹಿಳೆ. ಇದೀಗ ಮಮತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಾಯಿಲೆ ಬಗ್ಗೆ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ, “ಪ್ರಿಯ (ಸೂರ್ಯನ ಎಮೋಜಿ) , ನಾನು ಹಿಂದೆಂದಿಗಿಂತಲೂ ಈಗ ನಾನು ನಿನ್ನನ್ನು ಅಪ್ಪಿಕೊಳ್ಳುತ್ತೇನೆ. ಆದ್ದರಿಂದ ಗುರುತಿಸಲ್ಪಟ್ಟಿದ್ದೇನೆ, ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ಪ್ರತಿದಿನ ಬೆಳಗ್ಗೆ ನಿಮ್ಮ ಮೊದಲ ಕಿರಣವನ್ನು ಮಿನುಗುವಂತೆ ನೋಡುತ್ತೇನೆ. ನೀನು ಪಡೆದಿರುವ ಎಲ್ಲ ಬೆಳಕನ್ನು ನನಗೆ ಕೊಡು. ನಿನ್ನ ಕೃಪೆಯಿಂದ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ,” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Chhavi Mittal | ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಛವಿ ಮಿತ್ತಲ್: ಗಾಯದ ಗುರುತಿರುವ ಪೋಸ್ಟ್ ಹಂಚಿಕೊಂಡ ನಟಿ
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರೆಬಾ ಮೋನಿಕಾ ಜಾನ್, “ನೀವು ಹೋರಾಟಗಾರ ಮತ್ತು ನೀವು ಸುಂದರವಾಗಿದ್ದೀರಿ” ಎಂದು ಕಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು, “ನೀವು ನಿಜವಾಗಿಯೂ ಶಕ್ತಿಶಾಲಿ ಮಹಿಳೆ, ನಿಜವಾಗಿಯೂ ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ನಮಗೆ ಸ್ಫೂರ್ತಿ ನೀಡಿ,” ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, “ನೀವು ಎಲ್ಲರಿಗೂ ಸ್ಫೂರ್ತಿ, ನೀವು ಶೀಘ್ರದಲ್ಲೇ ಉತ್ತಮವಾಗುತ್ತೀರಿ. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ಯಾನ್ಸರ್ ಗೆದ್ದ ಮಮತಾ ಮೋಹನ್ ದಾಸ್
ಮಮತಾ ಅವರು ಕ್ಯಾನ್ಸರ್ ನಿಂದ ಗೆದ್ದು ಬಂದ ಮಹಿಳೆ. ಕೆಲವು ವರ್ಷಗಳ ಹಿಂದೆ ಮಮತಾ ಅವರಿಗೆ ಕ್ಯಾನ್ಸರ್ ಮರುಕಳಿಸಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ, “ನಾನು ಕ್ಯಾನ್ಸರ್ ಕಾಯಿಲೆಗೆ ಒಳಗಾದಾಗ ನಾನು ಎಷ್ಟು ಬಲಶಾಲಿಯಾಗಿದ್ದೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ವಿಷಯದ ಬಗ್ಗೆ, ಎಂದಿಗೂ ಚಿಂತಿಸದ ವ್ಯಕ್ತಿ. ಆದರೆ ಜೀವನದಲ್ಲಿ ಮೊದಲ ಬಾರಿಗೆ, ನಾನು ಹೆದರುತ್ತಿದ್ದೆ. ಹೇಳುವುದು ಸುಲಭ, ಸಕಾರಾತ್ಮಕವಾಗಿರಿ, ಆದರೆ ಈ ಬಾರಿ, ಭಯಪಡುವುದು ಸರಿ ಎಂದು ನಾನು ಭಾವಿಸಿದ್ದೆʼʼಎಂದು ಹೇಳಿಕೊಂಡಿದ್ದರು.
ಏನಿದು ವಿಟಿಲಿಗೋ?
ವಿಟಲಿಗೋ ಕಾಯಿಲೆಯಿಂದ ಬಳಲುವರು ಚರ್ಮದ ಬಣ್ಣವನ್ನು ಕಳೆದುಕೊಳ್ಳುತ್ತಾರೆ. ಮೆಲಟೋನಿನ್ ಅನ್ನು ಉತ್ಪಾದಿಸುವ ಚರ್ಮದ ಕೋಶಗಳನ್ನು ಸಾಯುವಂತೆ ಮಾಡುತ್ತದೆ ಅಥವಾ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಈ ಸ್ಥಿತಿಯು ಮಾರಣಾಂತಿಕವಲ್ಲ ಅಥವಾ ಸಾಂಕ್ರಾಮಿಕವಲ್ಲ. ಜಾಗತಿಕವಾಗಿ, 1% ಜನರು ವಿಟಲಿಗೋವನ್ನು ಹೊಂದಿದ್ದಾರೆ, ಇದು ಸಾಮಾನ್ಯವಾಗಿ ಕೈಗಳು, ಪಾದಗಳು, ತೋಳುಗಳು, ಮುಖ ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.
ಹರಿಹರನ್ ನಿರ್ದೇಶನದ 2005ರ ಮಲಯಾಳಂ ಚಲನಚಿತ್ರ ʻಮಯೂಖಂʼ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು ಮಮತಾ. ಜನಪ್ರಿಯ ಹಿನ್ನೆಲೆ ಗಾಯಕಿಯೂ ಹೌದು. ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲವು ತೆಲುಗು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | Aindrila Sharma | ಬದುಕುಳಿಯಲಿಲ್ಲ ನಟಿ ಐಂದ್ರಿಲಾ ಶರ್ಮಾ; 2 ಬಾರಿ ಕ್ಯಾನ್ಸರ್ ಗೆದ್ದಿದ್ದಾಕೆ, ಹೃದಯ ಸ್ತಂಭನದಿಂದ ಸಾವು