ಬೆಂಗಳೂರು: ಸೀರಿಯಲ್ ಶೂಟಿಂಗ್ ವೇಳೆ ನಟ ಮಂಡ್ಯ ರಮೇಶ್ (Mandya Ramesh) ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ರಮೇಶ್ ಅರವಿಂದ್ ನಿರ್ಮಾಣದ ಆಸೆ ಧಾರಾವಾಹಿ ಚಿತ್ರೀಕರಣದಲ್ಲಿ ನಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಮಂಡ್ಯ ರಮೇಶ್ ಗಾಯಗೊಂಡಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಘಟನೆ ನಡೆದಿದ್ದು, ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬಲಗಾಲು, ಬಲಗೈ ಮತ್ತು ಎಡಗೈಗೆ ಗಾಯಗಳಾಗಿವೆ. ಹೀಗಾಗಿ ಎಡಗಾಲಿನ ಮಂಡಿ ಭಾಗಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಇರುವ ಅಪೊಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮಂಡ್ಯ ರಮೇಶ್ ಪತ್ನಿ ಸರೋಜಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ | Ravichandran: ಮಾತಿನ ಮನೆಯಲ್ಲಿ ‘ದ ಜಡ್ಜ್ ಮೆಂಟ್’; ಕ್ರೇಜಿಸ್ಟಾರ್ ಅಭಿನಯದ ಚಿತ್ರ ಶೀಘ್ರ ತೆರೆಗೆ
ಈ ಬಗ್ಗೆ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ಪ್ರತಿಕ್ರಿಯಿಸಿ, ಶೂಟಿಂಗ್ ಮಾಡುತ್ತಿದ್ದಾಗ ತಂದೆಯವರು ಎಡವಿ ಬಿದ್ದಾಗ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೀರಿಯಲ್ ಶೂಟಿಂಗ್ ವೇಳೆ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈಗ ಅವರಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಭಾವುಕರಾದ ಶಿವ ರಾಜ್‌ಕುಮಾರ್
ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನೆಲಮಂಗಲ ತಾಲೂಕಿನಲ್ಲಿರುವ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ಶಿವ ರಾಜ್‌ಕುಮಾರ್ (Shiva Rajkumar) ಹಾಗೂ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
‘‘ಲೀಲಾವತಿ ಅವರಿಗೆ ಮೊದಲಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ. ನಾವು ಅವರನ್ನು ಯಾವಾಗ ಕಂಡರೂ ಅದೇ ಆತ್ಮೀಯತೆ, ಅದೇ ಪ್ರೀತಿಯೊಂದ ಮಾತನಾಡಿಸುತ್ತಿದ್ದರು. ಅವರ ಆ ಪ್ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈಗ ವಿನೋದ್ ರಾಜ್ ಅವರನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಲೀಲಾವತಿ ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತದೆ. ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ದೇವರ ಆಶೀರ್ವಾದವಿದೆ. ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
‘ʼಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿತ್ವ ಉಳ್ಳವರು. ನಾವು ಅವರನ್ನು ಇಷ್ಟೊಂದು ಪ್ರೀತಿಸಲು ಅದೇ ಕಾರಣ’ʼ ಎಂದು ಶಿವಣ್ಣ ಭಾವುಕರಾದರು. ಜತೆಗೆ ವಿನೋದ್ ರಾಜ್ ಕೈ ಹಿಡಿದು ಸಾಂತ್ವಾನ ಹೇಳಿದರು.
ʼʼನೋವು ಎಲ್ಲರಿಗೂ ಆಗುತ್ತೆ. ನಾವು ತಾಳಿಕೊಂಡಿಲ್ಲವೇ ಹಾಗೆಯೇ ನೀವು ಧೈರ್ಯ ತಂದುಕೊಳ್ಳಿ. ನಿಮ್ಮ ತಾಯಿಯವರಿಗೆ ಮಗ ಚೆನ್ನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವರ ಆಸೆಯಂತೆ ನೀವು ಚೆನ್ನಾಗಿರಬೇಕು’’ ವಿನೋದ್ಎಂ ರಾಜ್ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಧೈರ್ಯ ತುಂಬಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ