ಬೆಂಗಳೂರು: ಕಿರುತೆರೆ ನಟ ಮಂಡ್ಯ ರವಿ ಇಂದು ನಿಧನರಾಗಿದ್ದಾರೆ. ಕಾಮಾಲೆ ರೋಗದಿಂದ ಬಳಲುತ್ತಿದ್ದ ಅವರನ್ನು ಕಳೆದ ಕೆಲವು ದಿನಗಳ ಹಿಂದೆಯೇ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮಧ್ಯಾಹ್ನದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಿಡ್ನಿ, ಲಿವರ್ಗಳೆಲ್ಲ ಕಾರ್ಯ ನಿಲ್ಲಿಸಿದ್ದವು.
ಮಂಡ್ಯ ರವಿ (ರವಿ ಪ್ರಸಾದ್) ಅವರು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಗಳು ಜಾನಕಿ’ ಯಲ್ಲಿ ಜಾನಕಿಯ ತಂದೆ ಪಾತ್ರ ನಿರ್ವಹಿಸಿದ್ದರು. ಅದರಲ್ಲಿ ಅವರೊಬ್ಬ ರಾಜಕಾರಣಿಯಾಗಿ ನಟಿಸಿದ್ದರು. ವಿಲನ್ ಶೇಡ್ ಇರುವ ಆ ರೋಲ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ‘ಮುಕ್ತ’ ಮತ್ತು ‘ಮುಕ್ತ ಮುಕ್ತ’ ದಲ್ಲೂ ನಟಿಸಿದ್ದರು. ಹಾಗೇ, ಕಲರ್ಸ್ನ ಇನ್ನೊಂದು ಧಾರಾವಾಹಿ ‘ನಮ್ಮನೆ ಯುವರಾಣಿ’ಯಲ್ಲೂ ರವಿ ಪ್ರಸಾದ್ ಅಭಿನಯಿಸಿದ್ದಾರೆ. ಈ ಸೀರಿಯಲ್ನಲ್ಲಿ ಅಭಿನಯ ಮಾಡುತ್ತಿದ್ದಾಗಲೇ ಅವರ ಆರೋಗ್ಯ ಕೈಕೊಟ್ಟಿತ್ತು.
ರವಿ ಪ್ರಸಾದ್ ಮೊದಲು ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ಹೋದಾಗ ಕಾಣಿಸಿಕೊಂಡಿದ್ದು ಕಿಡ್ನಿ ಸಮಸ್ಯೆಯಾಗಿತ್ತು. ಹಲವು ಬಾರಿ ಡಯಾಲಿಸಿಸ್ಗೆ ಕೂಡ ಒಳಗಾಗಿದ್ದರು. ಇತ್ತೀಚೆಗೆ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Mandya Ravi | ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ