ಬೆಂಗಳೂರು: ಕೆಲವು ಸಮಯದಿಂದ ಮಂಕಾಗಿದ್ದ ಮಲಯಾಳಂ ಚಿತ್ರರಂಗ (Mollywood) ಮತ್ತೆ ಸದ್ದು ಮಾಡತೊಡಗಿದೆ. ಬ್ಯಾಕ್ ಟು ಬ್ಯಾಕ್ ಮಲಯಾಳಂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವ ಜತೆಗೆ ದೇಶದ ಗಮನ ಸೆಳೆಯುತ್ತಿವೆ. ಅದರಲ್ಲಿಯೂ ʻಮಂಜುಮ್ಮೇಲ್ ಬಾಯ್ಸ್ʼ (Manjummel Boys)ನ ಹವಾ ಜೋರಾಗಿಯೇ ಬೀಸುತ್ತಿದೆ. ಸುಮಾರು 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆ ಬರೋಬ್ಬರಿ 200 ಕೋಟಿ ರೂ ! ಮಲಯಾಳಿಗಳು ಮಾತ್ರವಲ್ಲ ವಿವಿಧ ಬಾಷಿಕರೂ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ಒಟಿಟಿ (OTT)ಗೆ ಬರಲು ಸಿದ್ಧವಾಗಿದೆ.
ಒಟಿಟಿಗೆ ಯಾವಾಗ ಎಂಟ್ರಿ? ಯಾವ ಫ್ಲಾಟ್‌ಫಾರ್ಮ್?
ಥಿಯೇಟರ್‌ಗಳಲ್ಲಿ ʻಮಂಜುಮ್ಮೇಲ್ ಬಾಯ್ಸ್ʼನನ್ನು ನೋಡಲಾಗದವರು ಒಟಿಟಿಗೆ ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಅವರ ಕಾತುರಕ್ಕೆ ಕೊನೆಗೂ ತೆರೆ ಬಿದ್ದಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ‘ಮಂಜುಮ್ಮೇಲ್ ಬಾಯ್ಸ್’ ವೀಕ್ಷಣೆಗೆ ಲಭ್ಯವಾಗಲಿದೆ. ಏಪ್ರಿಲ್ 5ರಿಂದ ಸಿನಿಮಾ ಪ್ರಸಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಮಲಯಾಳಂ ಜತೆಗೆ ತಮಿಳು, ಕನ್ನಡದಲ್ಲೂ ಸಿನಿಮಾ ನೋಡಬಹುದು. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.
ಅತ್ಯಧಿಕ ಗಳಿಕೆ ಕಂಡ ಮಾಲಿವುಡ್ ಚಿತ್ರ
ಚಿದಂಬರಂ ನಿರ್ದೇಶನದ ಈ ಚಿತ್ರ ಫೆಬ್ರವರಿ 22ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ಇದು ಸುಮಾರು 200 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಈ ಮೂಲಕ ಅತ್ಯಧಿಕ ಗಳಿಕೆ ಕಂಡ ಮಲಯಾಳಂ ಚಿತ್ರ ಎನ್ನುವ ದಾಖಲೆ ಬರೆದಿದೆ. ಇದು ಚಿದಂಬರಂ ಅವರ ಎರಡನೇ ಸಿನಿಮಾ. 2021ರಲ್ಲಿ ಇವರು ಆ್ಯಕ್ಷನ್ ಕಟ್ ಹೇಳಿದ್ದ ʼಜಾನ್.ಇ.ಮಾನ್ʼ ಚಿತ್ರ ಬಿಡುಗಡೆಯಾಗಿತ್ತು. ನಟ ʻಮಂಜುಮ್ಮೇಲ್ ಬಾಯ್ಸ್ʼ ಸಿನಿಮಾವನ್ನು ಸೌಬಿನ್ ಶಾಹಿರ್ ಚಿತ್ರವನ್ನು ನಿರ್ಮಾಣ ಮಾಡುವ ಜತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಮತ್ತಿತರರು ನಟಿಸಿದ್ದಾರೆ.
ಕಥೆ ಏನು?
2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್ಗೆ ಫ್ರೆಂಡ್ಸ್ ಗ್ರೂಪೊಂದಕು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನನ್ನು ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಯಶಸ್ವಿ ಆಗ್ತಾರಾ ಇಲ್ಲವಾ ಎಂಬುದೇ ಕಥೆ.
ನೈಜ ಘಟನೆ
ವಿಶೇಷ ಎಂದರೆ ಇದು ನೈಜ ಘಟನೆ ಆಧಾರಿತ ಸಿನಿಮಾ. ನೈಜವಾಗಿ, ಸರಳವಾಗಿ ಚಿತ್ರವನ್ನು ನಿರೂಪಿಸಲಾಗಿದೆ. ಇದು ಈ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಎಂದು ಸಿನಿಮಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಹಿಂದೆ ಸಿನಿಮಾ ರಂಗದ ಹಲವು ದಿಗ್ಗಜರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಇದನ್ನೂ ಓದಿ: OTT Releases: ʼಫೈಟರ್ʼನಿಂದ ʼಓಪನ್‌ಹೈಮರ್ʼವರೆಗೆ; ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಚಿತ್ರಗಳ ಪಟ್ಟಿ ಇಲ್ಲಿದೆ
ʻಮಂಜುಮ್ಮೇಲ್ ಬಾಯ್ಸ್ʼ ಚಿತ್ರದ ಮೂಲಕ ಮಾಲಿವುಡ್ ಭರ್ಜರಿ ಕಂಬ್ಯಾಕ್ ಮಾಡಿದೆ. ಇತ್ತೀಚೆಗೆ ತೆರೆಕಂಡ ಹಲವು ಮಲಯಾಳಂ ಚಿತ್ರಗಳಯ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿವೆ. ʼಪ್ರೇಮುಲುʼ, ʼಭ್ರಮಯುಗಂʼ, ʼಅಬ್ರಹಾಂ ಓಜ್ಲರ್ʼ ಮುಂತಾದ ಸಿನಿಮಾಗಳು ಹಿಟ್ ಆಗಿವೆ.