Site icon Vistara News

Mankirt Aulakh: ಪಂಜಾಬಿ ಗಾಯಕ ಮನ್‌ಕೀರ್ತ್ ಔಲಾಖ್ ದೇಶ ಬಿಟ್ಟು ಹೋಗದಂತೆ ತಡೆದ ಅಧಿಕಾರಿಗಳು: ಕಾರಣವೇನು?

Mankirt Aulakh Punjabi Singer Cancels Dubai Show

ಬೆಂಗಳೂರು: ಪಂಜಾಬಿ ಗಾಯಕ ಮನ್‌ಕೀರ್ತ್ ಔಲಾಖ್ (Mankirt Aulakh) ಅವರನ್ನು ಮೊಹಾಲಿಯ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳದಂತೆ ಎನ್‌ಐಎ ಅಧಿಕಾರಿಗಳು ತಡೆದಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಸಂಚುಕೋರ ಲಾರೆನ್ಸ್ ಬಿಷ್ಣೋಯ್ ಜತೆಗಿನ ಸಂಬಂಧಕ್ಕಾಗಿ ಔಲಾಖ್‌ ಅವರನ್ನು ಈ ಹಿಂದೆ ವಿಚಾರಣೆಗೆ ಗುರಿಪಡಿಸಲಾಗಿತ್ತು. ಆಗ ಅವರಿಗೆ ದೇಶ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿತ್ತು.

ಈ ನಡುವೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ದುಬೈಗೆಂದು ಹೊರಟಿದ್ದರು. ಆದರೆ ಎನ್‌ಐಎ ತಂಡ ವಿಮಾನ ನಿಲ್ದಾಣಕ್ಕೆ ತಲುಪಿ ಅವರನ್ನು ತಡೆದು ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಚಂಡೀಗಢದಲ್ಲಿರುವ ಎನ್‌ಐಎ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ಔಲಾಖ್‌ನನ್ನು ವಿಚಾರಣೆಗೊಳಪಡಿಸಿದೆ ಮತ್ತು ಅವರ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Pee-Gate | ವಿಮಾನಗಳಲ್ಲಿ ಪ್ರಯಾಣಿಕರ ದುರ್ವರ್ತನೆ ತಡೆಯುವುದು ಹೇಗೆ?

ಮಾರ್ಚ್‌ 3ರಂದು ಸಂಜೆ ಔಲಾಖ್ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳುತ್ತಿದ್ದರು. ನಂತರ ತಮ್ಮ ಇನ್‌ಸ್ಟಾದಲ್ಲಿ ದುಬೈನ ಕ್ಲಬ್‌ವೊಂದರಲ್ಲಿ ಪ್ರದರ್ಶನವನ್ನು ನೀಡಬೇಕಾಗಿತ್ತು ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದನ್ನು ರದ್ದುಗೊಳಿಸಲಾಯಿತು ಎಂದು ವೀಡಿಯೊ ಮೂಲಕ ಸಂದೇಶವನ್ನು ಹಂಚಿಕೊಂಡಿದ್ದರು. “ನಾವು ಶೀಘ್ರದಲ್ಲೇ ಎರಡು ದಿನಗಳಲ್ಲಿ ಕಾರ್ಯಕ್ರಮದ ಹೊಸ ದಿನಾಂಕಗಳನ್ನು ಘೋಷಿಸುತ್ತೇವೆ” ಎಂದು ಗಾಯಕ ಹೇಳಿಕೊಂಡಿದ್ದಾರೆ.

Exit mobile version