Site icon Vistara News

Manoj Bajpayee | ಹಣದ ಅನಿವಾರ್ಯತೆ ತುಂಬ ಇತ್ತು, ಸಾಲ ಮಾಡಿ ಸಹೋದರ ಊಟ ಬಡಿಸಿದ್ದ: ನಟ ಮನೋಜ್ ಬಾಜಪೇಯಿ

Manoj Bajpayee

ಬೆಂಗಳೂರು : ನಟ ಮನೋಜ್ ಬಾಜಪೇಯಿ (Manoj Bajpayee) ಸಂದರ್ಶನವೊಂದರಲ್ಲಿ ಚಲನಚಿತ್ರ ನಿರ್ಮಾಪಕರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಸಿಕೊಂಡು ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಟನಾ ವೃತ್ತಿಗೆ ಕಾಲಿಡುವ ಸಂದರ್ಭದಲ್ಲಿ ಎದುರಿಸಿದ ಕಷ್ಟದ ಸಂಗತಿಗಳನ್ನು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ನಟ ಮಾತನಾಡಿ ʻದೌಡ್ʼ ಚಿತ್ರದ ಒಂದು ಪಾತ್ರಕ್ಕಾಗಿ ಮನೋಜ್‌ ಅವರನ್ನು ಚಲನಚಿತ್ರ ನಿರ್ಮಾಪಕರ ಕಚೇರಿಗೆ ಕರೆಸಲಾಯಿತು. ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ ಇತ್ತು. ಚಿಕ್ಕ ಪಾತ್ರವಾದರೂ ಸರಿ ನಿಭಾಯಿಸುವ ಅನಿವಾರ್ಯತೆ ಇತ್ತು. ಮೊದಲಿಗೆ ನಿರ್ದೇಶಕ ರಾಮ್‌ಗೋಪಲ ವರ್ಮಾ ಅವರು ಪಾತ್ರ ನೀಡುವಾಗ ಈ ಮೊದಲು ಯಾವ ಪಾತ್ರ ನಿಭಾಯಿಸಿದ್ದೀರಿ ಎಂದು ಕೇಳಿದರು. ನಾನು ಬ್ಯಾಂಡಿಟ್ ಕ್ವೀನ್ ಮಾಡಿದೆ. ಆದರೆ ನೀವು ನನ್ನನ್ನು ಗುರುತಿಸುವುದಿಲ್ಲ. ನಾನು ಮಾತನಾಡದ ಪಾತ್ರದಲ್ಲಿ ನಟಿಸಿದ್ದೇನೆ. ನಾನು ಮಾನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ನಾನು ಅವರಿಗೆ ಹೇಳಿದೆ. ಹೇಳುತ್ತಿದ್ದಂತೆ ಅವರು ಎದ್ದುನಿಂತು, ನನ್ನನ್ನು ಹಲವು ವರ್ಷಗಳಿಂದ ಹುಡುಕುತ್ತಿರುವುದಾಗಿ ಅವರು ಹೇಳಿದರು. ನಂತರ ʻದೌಡ್ʼ ಅನ್ನು ಮರೆತುಬಿಡಿ, ನಾನು ನಿಮಗಾಗಿ ಇನ್ನೊಂದು ಚಲನಚಿತ್ರವನ್ನು ಮಾಡುತ್ತೇನೆ, ನೀವು ನಾಯಕನಾಗಿ ನಟಿಸುವಿರಿʼʼ ಎಂದು ಹೇಳಿದರು.

ಇದನ್ನೂ ಓದಿ | Actor Prabhas | ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಭಾಸ್‌: ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಪಠಾಣ್‌ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌

ಮನೋಜ್ ಮಾತು ಮುಂದುವರಿಸಿ “ನನಗೆ ಆ ಕ್ಷಣಕ್ಕೆ ಸಂತೋಷವಾಗಿದ್ದರೂ ಈ ಚಿತ್ರ ನನಗೆ ಅನಿವಾರ್ಯವಾಗಿತ್ತು. ನಾನು ಬಾಡಿಗೆಯನ್ನು ಪಾವತಿಸಬೇಕಾಗಿತ್ತು. ಅನೇಕ ಜನರು ಈ ರೀತಿಯ ಭರವಸೆಗಳನ್ನು ನೀಡುತ್ತಾರೆ. ಹಾಗಾಗಿ ನಾನು ಅವರಿಗೆ ʻʻಸರ್‌ ನನಗೆ ಹಣದ ಅವಶ್ಯಕತೆ ಇದೆ. ಹೊಸ ಪ್ರಾಜೆಕ್ಟ್‌ ಮರೆತು ಬಿಡಿ. ನನ್ನನ್ನು ನಂಬಿರಿ, ನಾನು ದೌಡ್‌ನಲ್ಲಿ ನಟಿಸುತ್ತೇನೆ ಎಂದೆʼʼ ಎಂದರು. ʻದೌಡ್‌ʼ ಚಿತ್ರದಲ್ಲಿ ಪಾತ್ರ ಸಿಕ್ಕಿತು ಮತ್ತು ಅದಕ್ಕಾಗಿ ಅವರು 30,000 ರೂ ನನಗೆ ಸಂಭಾವನೆ ನೀಡಿದರು. ಆ ಸಮಯದಲ್ಲಿ ನನಗೆ ದೊಡ್ಡ ಮೊತ್ತವಾಗಿತ್ತು. ಬಂದ ಕೂಡಲೇ ಒಂದು ವರ್ಷದ ಬಾಡಿಗೆಯನ್ನು ಪಾವತಿಸಿದೆʼʼಎಂದರು. ಅಂತಿಮವಾಗಿ ‘ಸತ್ಯ’ದಲ್ಲಿಯೂ ನಾನು ನಟಿಸಿದೆ. ಅದರಲ್ಲಿ ʻಭಿಕು ಮ್ಹಾತ್ರೆʼ ಪಾತ್ರ ನಿಭಾಯಿಸಿದೆ. ಅದೃಷ್ಟವಶಾತ್‌ ಅಭಿಮಾನಿಗಳ ಮೆಚ್ಚಿನ ಪಾತ್ರವಾಯಿತುʼʼಎಂದರು.

ತಮ್ಮ ಸಿನಿಮಾಗಳನ್ನೂ ನೋಡುವುದು ಕೂಡ ಕಷ್ಟಕರ ಪರಿಸ್ಥಿತಿ ಇತ್ತು ಎಂದು ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಅವರ ನಾಟಕವೊಂದನ್ನು ವೀಕ್ಷಿಸಲು ತಮ್ಮ ಹಳ್ಳಿಯಿಂದ ತಮ್ಮ ಸಹೋದರನನ್ನು ಕರೆಸಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು. ʻʻನನ್ನ ಸಹೋದರ ಯಾವಾಗಲೂ ಸಿನಿಮಾದಲ್ಲಿ ಕೆಲಸ ಮಾಡಲು ಹೇಳುತ್ತಿದ್ದರು, ಮತ್ತು ನಾಟಕಗಳನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಹೇಳುತ್ತಿದ್ದರು. ಆದರೆ ಒಂದು ದಿನ ಒಂದು ಪ್ರದರ್ಶನದ ನಂತರ, ನನ್ನ ನಾಟಕ ನೋಡಿ ಸಹೋದರ ತುಂಬಾ ಪ್ರಭಾವಿತರಾದರು. ನನಗೆ ಮಟನ್‌ ಸಾರು ಮಾಡಿ ಬಡಿಸಿದ್ದರು. ಮಟನ್ ಖರೀದಿಸಲು ಹಣ ಎಲ್ಲಿಂದ ಬಂತು ಎಂದು ನಾನು ಅವರನ್ನು ಕೇಳಿದೆ. ನನ್ನ ಸಹೋದರ ಅವರು ಹಣವನ್ನು ಸಾಲ ಪಡೆದಿದ್ದಾರೆಂದು ಹೇಳಿದರು. ಕಾರಣವನ್ನು ತಿಳಿಸಿದ ಅವರು ನನ್ನ ನಾಟಕದಿಂದ ತುಂಬಾ ಪ್ರಭಾವಿತರಾಗಿ ಈ ಮೂಲಕ ನನ್ನನ್ನು ಅಭಿನಂದಿಸಲು ಬಯಸಿದ್ದರುʼʼಎಂದರು.

ಮನೋಜ್ ಬಾಜಪೇಯಿ ದೇಶದ ಅತ್ಯಂತ ಮೆಚ್ಚುಗೆ ಪಡೆದ ನಟರಲ್ಲಿ ಒಬ್ಬರು. ಇತ್ತೀಚೆಗೆʻ ದಿ ಫ್ಯಾಮಿಲಿ ಮ್ಯಾನ್ʼ ಪಾರ್ಟ್‌ 1 ಹಾಗೂ 2 ವೆಬ್‌ ಸಿರೀಸ್‌ ಮೂಲಕ ಅವರು ದೇಶಾದ್ಯಂತ ಮನೆಮಾತಾಗಿದ್ದಾರೆ.

ಇದನ್ನೂ ಓದಿ | RRR Movie | ಆರ್‌ಆರ್‌ಆರ್‌ ಬಾಲಿವುಡ್‌ ಸಿನಿಮಾವಲ್ಲ: ನಿರ್ದೇಶಕ ರಾಜಮೌಳಿ

Exit mobile version