ಮುಂಬೈ: ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ಅವರ ಗುಲ್ಮೊಹರ್ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಹಾಗೆಯೇ ಅವರ ಪ್ರಸಿದ್ಧ ʼಫ್ಯಾಮಿಲಿ ಮ್ಯಾನ್ʼ ಸರಣಿಯ ಮೂರನೇ ಭಾಗ ಇದೇ ಹೋಳಿಗೆ ಬಿಡುಗಡೆಯಾಗಲಿದೆ. ಈ ಮಧ್ಯೆ ನಟ ಯುಟ್ಯೂಬರ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: Manoj Bajpayee | ಹಣದ ಅನಿವಾರ್ಯತೆ ತುಂಬ ಇತ್ತು, ಸಾಲ ಮಾಡಿ ಸಹೋದರ ಊಟ ಬಡಿಸಿದ್ದ: ನಟ ಮನೋಜ್ ಬಾಜಪೇಯಿ
“ಅದು 90ರ ದಶಕ. ಸಿನಿಮಾದಲ್ಲಿ ನಟಿಸುವ ಆಸೆಯೊಂದಿಗೆ ದೆಹಲಿಯಿಂದ ಮುಂಬೈಗೆ ಬಂದಿದ್ದೆ. ಆದರೆ ಆಗ ನನ್ನ ಬಳಿ ಹಣವೂ ಇರಲಿಲ್ಲ, ಕೆಲಸವೂ ಇರಲಿಲ್ಲ. ಹೊತ್ತಿನ ಊಟವೂ ಸಿಗದ ಪರಿಸ್ಥಿತಿಯಲ್ಲಿದೆ. ನನ್ನ ಮುಂದಿನ ಊಟ ಎಲ್ಲಿಂದ ಬರುತ್ತದೆ ಎನ್ನುವುದು ನನಗೂ ಗೊತ್ತಿರುತ್ತಿರಲಿಲ್ಲ. ಹಣ ಸಿಗದಿದ್ದರೂ ರಂಗಭೂಮಿಯಲ್ಲಿ ದಿನಕ್ಕೆ 18 ತಾಸು ಕೆಲಸ ಮಾಡುತ್ತಿದ್ದೆ. ಅದರಲ್ಲಿ ಏನೋ ಒಂದು ರೀತಿಯ ತೃಪ್ತಿ ಇತ್ತು. ನನ್ನ ಪ್ರತಿಭೆ ಬಗ್ಗೆ ನನಗೇ ಅನುಮಾನ ಹುಟ್ಟಿದ ಕಾಲವದು” ಎಂದು ನಟ ತಾವು ಮುಂಬೈಗೆ ಬಂದ ಮೊದಲ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
“ಆಗ ನಾನು ದೈಹಿಕವಾಗಿಯೂ ದುರ್ಬಲನಾಗಿದ್ದೆ. ಯಾವುದೇ ನಿರ್ದೇಶಕರ ಕಚೇರಿಗೆ ಹೋದರು ಅವರು ತಕ್ಷಣ ನನಗೆ ಬಾಗಿಲು ತೋರಿಸುತ್ತಿದ್ದರು. ಶೇಖರ್ ಕಪೂರ್ ಅವರ ʼಬ್ಯಾಂಡಿಟ್ ಕ್ವೀನ್ʼ ಸಿನಿಮಾದಲ್ಲಿ ನಟಿಸಿದ ನಂತರ ನನಗೆ ರಾಮ್ ಗೋಪಾಲ್ ವರ್ಮಾ ಅವರ ʼದೌಡ್ʼ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಾದ ನಂತರ ಸತ್ಯ ಸಿನಿಮಾದಲ್ಲಿ ನಟಿಸಿದೆ. ಅದು ಹಿಟ್ ಆಯಿತು” ಎಂದಿದ್ದಾರೆ ನಟ.
ಇದನ್ನೂ ಓದಿ: Karisma Kapoor: ಫ್ಯಾಮಿಲಿ ಜತೆಗೆ ಕರಿಷ್ಮಾ ಕಪೂರ್ ಡಿನ್ನರ್, ಗೆಟ್-ಟುಗೆದರ್ ಫೋಟೊ ವೈರಲ್!
ಮಾತು ಮುಂದುವರಿಸಿದ ಅವರು, “ಸತ್ಯ ಹಿಟ್ ಆದ ಮೇಲೂ ನನ್ನ ಕಷ್ಟದ ದಿನಗಳೇನು ಮುಗಿಯಲಿಲ್ಲ. ನಾನು ಏಳು ವರ್ಷ ಸಿನಿಮಾಗಳಿಗಾಗಿ ಒದ್ದಾಡಬೇಕಾಯಿತು. ಯಾರೊಬ್ಬರೂ ನನ್ನನ್ನು ಗುರುತಿಸುತ್ತಿರಲಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಮಾಧ್ಯಮದವರಾಗಲೀ, ವರದಿಗಾರರಾಗಲೀ ಅಥವಾ ಕಾರ್ಯಕ್ರಮ ನಡೆಸುವವರು ನನ್ನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಪ್ರಕಾಶ್ ಝಾ ಅವರು ʼರಾಜನೀತಿʼ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಕೊಟ್ಟ ನಂತರ ಬದುಕು ಕೊಂಚ ಮಟ್ಟಿಗೆ ಬದಲಾವಣೆ ಆಗಲಾರಂಭಿಸಿತು” ಎಂದು ಹೇಳಿಕೊಂಡಿದ್ದಾರೆ.