ಬೆಂಗಳೂರು: ತಮಿಳು ನಟ ಮನ್ಸೂರ್ ಅಲಿ ಖಾನ್ (Mansoor Ali Khan) ಅವರು ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರ ಬಿದ್ದು ಆಗಿದ್ದರು. ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆಗೆ ಅನೇಕರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಕೇಸ್ ದಾಖಲಾಗಿತ್ತು. ಆದರೀಗ ನಟ ಮನ್ಸೂರ್ ಅಲಿ ಖಾನ್ ತ್ರಿಶಾ ಕೃಷ್ಣನ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಕೆಲ ದಿನಗಳ ಹಿಂದೆ ತ್ರಿಶಾ ಬಳಿ ಮನ್ಸೂರ್ ಕ್ಷಮೆ ಕೇಳಿದ್ದರೂ ಇದೀಗ ಈ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ.
ಈ ಬಗ್ಗೆ ಮನ್ಸೂರ್ ಮಾತನಾಡಿ, “ನಾನು ಈಗ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ನನ್ನ ವಕೀಲರು ಎಲ್ಲವನ್ನೂ ಬಹಿರಂಗಪಡಿಸುತ್ತಾರೆʼʼಎಂದಿದ್ದಾರೆ. ತ್ರಿಶಾಗೆ ಕ್ಷಮೆಯಾಚಿಸಿದ ಬಗ್ಗೆ ಕೇಳಿದರೆ, ʻಅದೊಂದು ದೊಡ್ಡ ಜೋಕ್ʼ ಎಂದಿದ್ದಾರೆ.
ಮನ್ಸೂರ್ ಅಲಿ ಖಾನ್ ಹೇಳಿದ್ದೇನು?
“ನಾನು ಲಿಯೋ ಸಿನಿಮಾದಲ್ಲಿ ತ್ರಿಶಾ ಅವರ ಜತೆ ನಟಿಸುತ್ತೇನೆ ಎಂದಾಗ ಖುಷಿಯಾಯಿತು. ಬೇರೆ ನಟಿಯರ ಜತೆ ಇದ್ದಂತೆ ತ್ರಿಶಾ ಅವರ ಜತೆಗೂ ಒಂದು ಬೆಡ್‌ರೂಮ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನಾನು ತುಂಬ ರೇಪ್ ದೃಶ್ಯಗಳಲ್ಲಿ ನಟಿಸಿರುವ ಕಾರಣ ಇದೆಲ್ಲ ನನಗೆ ಏನೂ ಅನಿಸುವುದಿಲ್ಲ. ಆದರೆ, ಸಿನಿಮಾ ತಂಡದವರು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವ ವೇಳೆ ನನಗೆ ತ್ರಿಶಾ ಅವರನ್ನು ತೋರಿಸಲೇ ಇಲ್ಲ” ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Mansoor Ali Khan: ನಟಿ ತ್ರಿಶಾ ಕೃಷ್ಣನ್‌ಗೆ ಕ್ಷಮೆಯಾಚಿಸಿದ ಮನ್ಸೂರ್ ಅಲಿ ಖಾನ್!
ತಿರುಗೇಟು ಕೊಟ್ಟಿದ್ದ ತ್ರಿಶಾ ಕೃಷ್ಣನ್
ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದರು “ಮನ್ಸೂರ್ ಅಲಿ ಖಾನ್ ಅವರು ಇತ್ತೀಚೆಗೆ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ ವಿಡಿಯೊ ನೋಡಿದೆ. ಇಂತಹ ಕೀಳು ಅಭಿರುಚಿಯ, ಸ್ತ್ರೀದ್ವೇಷದಿಂದ ಕೂಡಿರುವ, ತುಚ್ಚ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾನು ಇಂತಹ ವ್ಯಕ್ತಿಯ ಜತೆ ಇದುವರೆಗೆ ತೆರೆ ಹಂಚಿಕೊಂಡಿಲ್ಲ ಎಂಬುದೇ ಸಮಾಧಾನದ ಸಂಗತಿ. ಅಷ್ಟೇ ಅಲ್ಲ, ನಾನು ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೆ ಈ ವ್ಯಕ್ತಿಯ ಜತೆ ನಟಿಸುವುದಿಲ್ಲ. ಇಂತಹ ವ್ಯಕ್ತಿಗಳು ಮನುಕುಲಕ್ಕೇ ಕೆಟ್ಟ ಹೆಸರು ತರುತ್ತಾರೆ” ಎಂದು ಪೋಸ್ಟ್ ಮಾಡಿದ್ದರು.
ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಗಣ್ಯರು ಭಾರಿ ಖಂಡನೆ ವ್ಯಕ್ತಪಡಿಸಿದ್ದರು. ಗಾಯಕಿ ಚಿನ್ಮಯಿ ಶ್ರೀಪಾದ, ನಿರ್ದೇಶಕ ಲೋಕೇಶ್ ಕನಕರಾಜ್ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ, ನಟಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. “ಮಹಿಳಾ ಆಯೋಗದ ಸದಸ್ಯೆಯಾಗಿ ಮನ್ಸೂರ್ ಅಲಿ ಖಾನ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆಯೋಗದ ಹಿರಿಯರ ಜತೆಗೂ ಮಾತನಾಡಿದ್ದೇನೆ. ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದರು.
ವಿವಾದ ಭುಗಲೇಳುತ್ತಲೇ ಮನ್ಸೂರ್ ಅಲಿ ಖಾನ್ ಸ್ಪಷ್ಟನೆ ನೀಡಿದ್ದರು. “ನಾನು ನಟಿಯರನ್ನು ಗೌರವಿಸುತ್ತೇನೆ. ನನ್ನ ಮಗಳು ತ್ರಿಶಾ ಅವರ ದೊಡ್ಡ ಅಭಿಮಾನಿ. ನಾನು ಉದ್ದೇಶಪೂರ್ವಕವಾಗಿ ನೋವುಂಟು ಮಾಡಬೇಕು ಎಂದು ಹಾಗೆ ಹೇಳಿಲ್ಲ. ತಮಾಷೆಯಾಗಿ ಮಾತನಾಡುವಾಗ ಹಾಗೆ ಹೇಳಿದೆ” ಎಂದ್ದರು.
ನಂತರ ತಮಿಳುನಾಡು ಪೊಲೀಸರು ಮನ್ಸೂರ್ ಅಲಿ ಖಾನ್ ಅವರನ್ನು ವಿಚಾರಣೆಗೊಳಪಡಿಸಿದ ನಂತರ, ನಟ ಕ್ಷಮೆಯಾಚನೆಯ ಬಳಿಕ ಬಿಡುಗಡೆ ಮಾಡಿದರು. ತನ್ನ ಮೇಲೆ ಮೊಕದ್ದಮೆ ಹೂಡುವ ಮನ್ಸೂರ್ ಅಲಿ ಖಾನ್ ಅವರ ಹೊಸ ನಿರ್ಧಾರದ ಬಗ್ಗೆ ತ್ರಿಶಾ ಇನ್ನೂ ಪ್ರತಿಕ್ರಿಯಿಸಿಲ್ಲ.