ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (Mansore) ಕನ್ನಡ ಚಿತ್ರರಂಗದ ಪ್ರತಿಭಾವಂತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳನ್ನು ಪ್ರೇಕ್ಷಕರ ಎದುರು ಪ್ರಸ್ತುತ ಪಡಿಸುವಲ್ಲಿ ಅವರು ಸದಾ ಮುಂದಿರುತ್ತಾರೆ. ತಮ್ಮದೆ ಆದ ವಿಭಿನ್ನ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತ ಬಂದಿರುವ ಮಂಸೋರೆ ಸಾರಥ್ಯದ ʼ19-20-21ʼ ಹಾಗೂ ʼಆಕ್ಟ್-1978ʼ (Act 1978) ಚಿತ್ರಗಳು ಇದೀಗ ‘Bcineet’ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ.
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ‘19.20.21′. ಒಬ್ಬ ಅಮಾಯಾಕ ಮತ್ತು ಅವನ ಕುಟುಂಬವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವ್ಯವಸ್ಥೆಯೂ ಹಿಂಸಿಸಿದ ಕಥೆಯನ್ನು ಮಂಸೋರೆ ಪ್ರೇಕ್ಷಕರ ಮನಸ್ಸಿಗಿಳಿಸಿದ್ದರು. ರಂಗಭೂಮಿ ಕಲಾವಿದರರಾದ ಶೃಂಗ ಬಿ.ವಿ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ.ಪಲ್ಲವಿ, ಮಹದೇವ್ ಹಡಪದ, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ದಂಡೇ ತಾರಾಗಣದಲ್ಲಿದೆ. ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದಾರೆ.
‘ಆ್ಯಕ್ಟ್ 1978’
ಭ್ರಷ್ಟ ವ್ಯವಸ್ಥೆಯಿಂದ ರೋಸಿ ಹೋಗುವ ಏಕಾಂಗಿ ಮಹಿಳೆ ತನ್ನ ಹಕ್ಕು ಪಡೆದುಕೊಳ್ಳಲು ಅಂತಿಮವಾಗಿ ಹಿಂಸೆಯ ದಾರಿ ಹಿಡಿದು ತನ್ನನ್ನೇ ಬಲಿಕೊಟ್ಟುಕೊಳ್ಳುವ ಮೂಲಕ ಭ್ರಷ್ಟರ ಕಣ್ಣುತೆರೆಸಲು ಕಾರಣವಾಗುತ್ತಾಳೆ ಎಂಬುದು ‘ಆ್ಯಕ್ಟ್ 1978’ ಸಿನಿಮಾದ ಕತೆ. ಯಜ್ಞಾ ಶೆಟ್ಟಿ, ಬಿ.ಸುರೇಶ್, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಪ್ರಮೋದ್ ಶೆಟ್ಟಿ, ಸುಧಾ ಬೆಳವಾಡಿ ಮತ್ತಿತರರು ನಟಿಸಿದ್ದ ಈ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಮಂಸೋರೆ ಆ್ಯಕ್ಷನ್ ಕಟ್ ಹೇಳಿದ್ದು, ದೇವರಾಜ್ ಆರ್. ನಿರ್ಮಿಸಿದ್ದಾರೆ. ಈ ಚಿತ್ರ ಕೂಡ ಇದೀಗ ‘Bcineet’ನಲ್ಲಿ ಬಿಡುಗಡೆಯಾಗಿದೆ.
ಮಂಸೋರೆ ವಿಭಿನ್ನ, ಸಮಾಜಮುಖಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದ ಮನ್ನಣೆ ತಂದುಕೊಟ್ಟಿದ್ದಾರೆ. 2018ರಲ್ಲಿ ತೆರೆಕಂಡ ಮಂಸೋರೆ ನಿರ್ದೇಶನದ ಕನ್ನಡ ಚಿತ್ರ ʼನಾತಿ ಚರಾಮಿʼ 5 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅತ್ಯುತ್ತಮ ಕನ್ನಡ ಪ್ರಶಸ್ತಿ ಸೇರಿದಂತೆ ಅತ್ಯುತ್ತಮ ಸಂಕಲನ, ಹಾಡು, ಗಾಯನ ಹಾಗೂ ನಟನೆಗೆ ಪ್ರಶಸ್ತಿ ಲಭಿಸಿತ್ತು. ಚಿತ್ರದ ನಾಯಕಿ ಶ್ರುತಿ ಹರಿಹರನ್ ಅವರ ಅಭಿನಯ ತೀರ್ಪುಗಾರರ ಮಂಡಳಿಯ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಧವೆಯಾದ ಯುವತಿಯೊಬ್ಬಳ ಮಾನಸಿಕ ತೊಳಲಾಟವನ್ನು ಈ ಸಿನಿಮಾ ತೆರೆ ಮೇಲೆ ಅನಾವರಣಗೊಳಿಸಿತ್ತು. ಈ ಹಿಂದೆ ಮಂಸೋರೆ ನಿರ್ದೇಶನದ ‘ಹರಿವು’ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ: Kaatera Movie: 95 ಕೋಟಿ ರೂ. ಕಲೆಕ್ಷನ್ ಮಾಡಿದ ಕಾಟೇರ; ಒಟಿಟಿಗೆ ಯಾವಾಗ ಎಂಟ್ರಿ?