Site icon Vistara News

Masha And The Bear: ಬೆಂಗಳೂರಿಗೆ ಬರ್ತಿದ್ದಾರೆ ʻಮಾಶಾ ಆ್ಯಂಡ್‌ ದಿ ಬೇರ್ʼ!

Masha And The Bear in banglore

ಬೆಂಗಳೂರು: ವಿಶಿಷ್ಟವಾದ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಕೊಡುವಲ್ಲಿ ಮುಂಚೂಣಿಯಲ್ಲಿರುವ ವಯಕಾಮ್‌ 18 ಲೈವ್‌, ಇದೀಗ ತನ್ನ ದಾರಿಯಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಆ್ಯಂಡ್‌ ದಿ ಬೇರ್​ (Masha And The Bear) ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ವೇದಿಕೆ ಸಜ್ಜುಗೊಂಡಿದೆ.

ಜನಪ್ರಿಯ ಕಾರ್ಟೂನ್‌ ಸಿರೀಸ್‌ ‘ಮಾಶಾ ಆ್ಯಂಡ್‌ ದಿ ಬೇರ್’ ಅನ್ನು ರಂಗವೇದಿಕೆಗೆ ಅಳವಡಿಸಿ ಭಾರತದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಲು ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಬಾರಿ ತಮ್ಮ ಅಭಿಮಾನಿ ಚಿಣ್ಣರ ಎದುರು ನೇರವಾಗಿ ಕಾಣಿಸಿಕೊಳ್ಳಲಿರುವ ಅವರು, ಪತ್ತೇದಾರಿ ಕಥೆಯೊಂದನ್ನು ರಂಗದ ಮೇಲೆ ಪ್ರಸ್ತುತಪಡಿಸಲಿದ್ದಾರೆ.
ವಯಕಾಮ್18 ಲೈವ್ ನಿರ್ಮಾಣ ಮಾಡಿರುವ, ಎಸ್‌ಎಸ್‌ಬಿಸಿ ಇಂಡಿಯಾ ಪ್ರಸ್ತುತಪಡಿಸುತ್ತಿರುವ ಈ ಲೈವ್‌ ಷೋ ಟೂರ್‌, ಡಿಸೆಂಬರ್ 23ರಂದು ಮುಂಬೈನಿಂದ ಪ್ರಾರಂಭಗೊಳ್ಳಲಿದೆ. ನಂತರ ಭಾರತದ ಪ್ರಮುಖ ಮಹಾನಗರಗಳಾದ ದೆಹಲಿ, ಹೈದರಾಬಾದ್‌ ಮತ್ತು ಬೆಂಗಳೂರುಗಳಲ್ಲಿಯೂ ಪ್ರದರ್ಶನ ನೀಡಿ ಮತ್ತೆ ಮುಂಬೈನಲ್ಲಿಯೇ ಈ ಲೈವ್‌ಷೋ ಟೂರ್ ಕೊನೆಗೊಳ್ಳಲಿದೆ.

ಪತ್ತೇದಾರಿ ಕಥೆಯಲ್ಲಿ ನಿಮ್ಮ ಪಾಲೂ ಇರಲಿದೆ!

‘ಅ ವೆರಿ ಡಿಟೆಕ್ಟೀವ್ ಸ್ಟೋರಿ’ ಎನ್ನುವುದು ಈ ಷೋಗೆ ನೀಡಿರುವ ಅಡಿಟಿಪ್ಪಣಿ. ಹೌದು, ಈ ಲೈವ್‌ ಷೋದಲ್ಲಿ ಮಾಶಾ ಮತ್ತು ಬೇರ್ ಸೇರಿಕೊಂಡು ಮನೆಯಲ್ಲಿ ಕಳೆದುಹೋಗಿರುವ ವಸ್ತುವೊಂದನ್ನು ಹುಡುಕುವ ಪತ್ತೇದಾರಿ ಕೆಲಸ ಮಾಡಲಿದ್ದಾರೆ. ಪತ್ತೇಧಾರಿ ಕಥೆ ಅಂದಮೇಲೆ ಕೇಳಬೇಕೆ? ಸಾಕಷ್ಟು ರೋಚಕತೆ, ಕುತೂಹಲ, ಪನ್‌ ಎಲ್ಲವೂ ಇರಲಿದೆ. ಅಷ್ಟೇ ಅಲ್ಲ, ತಮ್ಮ ಪತ್ತೇಧಾರಿಕೆಯಲ್ಲಿ ಮಾಶಾ ಮತ್ತು ಬೇರ್ ಪ್ರೇಕ್ಷಕರ ಎದುರು ಕೂತಿರುವವರ ಸಹಾಯವನ್ನೂ ಪಡೆಲಿದ್ದಾರೆ! ಅಂದರೆ ಪ್ರೇಕ್ಷಕನೂ ಈ ಷೋದ ಪಾತ್ರಧಾರಿ ಆಗಿರುತ್ತಾನೆ? ಪ್ರೇಕ್ಷಕರ ಜೊತೆ ಮಾತಾಡುತ್ತ, ಅವರನ್ನು ನಗಿಸುತ್ತ, ಅವರಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಹಾಗೆಯೇ ಇಡೀ ಷೋವನ್ನು ವಿನ್ಯಾಸಗೊಳಿಸಲಾಗಿದೆ. ವಿಶಾಲ್ ಅಸ್ರಾಣಿ ಈ ಷೋವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Darshan Thoogudeepa: ಭಾರಿ ಮೊತ್ತಕ್ಕೆ ಕಾಟೇರ ಡಿಜಿಟಲ್‌, ಸ್ಯಾಟಲೈಟ್ ಮಾರಾಟ!

ಯಾರು ಯಾರೆಲ್ಲ ಇರ್ತಾರೆ?

ʻಮಾಶಾ ಆ್ಯಂಡ್‌ ದಿ ಬೇರ್ʼ ಬಗ್ಗೆ ಪುಟಾಣಿಗಳಿಗೆ ಹೇಳುವುದೇ ಬೇಕಿಲ್ಲ. ಎಲ್ಲ ಮಕ್ಕಳಿಗೂ ಗೊತ್ತಿರುವ, ಎಲ್ಲ ಮಕ್ಕಳೊಟ್ಟಿಗೆ ಹಿರಿಯರಿಗೂ ಪರಿಚಿತವಾಗಿರುವ ಕಾರ್ಟೂನ್‌ ಕ್ಯಾರೆಕ್ಟರ್‌ಗಳು ಅವು. ಆದರೆ ಷೋದಲ್ಲಿ ಬರೀ ಆ ಎರಡು ಪಾತ್ರಗಳು ಮಾತ್ರವಲ್ಲ. ಸೀರೀಸ್‌ನಲ್ಲಿ ಕಾಣುವ, ಪ್ರೊಫೆಸರ್ ನಾನ್‌ಬೆಲೆವಿಯಸ್‌, ರೋಸಿ, ಪಾಂಡಾ, ಸ್ಲೈ ಫಾಕ್ಸ್‌ ಮತ್ತು ಸಿಲ್ಲಿ ಫಾಕ್ಸ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಈ ಷೋದ ಭಾಗವಾಗಿರುತ್ತವೆ.

ಯಾವಾಗ ಎಲ್ಲಿ?

ಮಾಶಾ ಆ್ಯಂಡ್‌ ದಿ ಬೇರ್ ಲೈವ್ ಷೋ ಟೂರ್ ಡಿಸೆಂಬರ್ 23ರಂದು ಮುಂಬೈನಲ್ಲಿ ಆರಂಭಗೊಳ್ಳುತ್ತದೆ. 24ರಂದೂ ಮುಂಬೈನಲ್ಲಿಯೇ ಪ್ರದರ್ಶನ ಇರುತ್ತದೆ. 2024 ಜನವರಿ 20 ಮತ್ತು 21ರಂದು ದೆಹಲಿಯಲ್ಲಿ ಎರಡು ದಿನಗಳ ಷೋ ಆಯೋಜಿಸಲಾಗಿದೆ. ಫೆಬ್ರುವರಿ 3 ಮತ್ತು 4ರಂದು ಹೈದರಾಬಾದ್‌ನಲ್ಲಿ ಪ್ರದರ್ಶನ ನಡೆಯಲಿದೆ.
ಫೆಬ್ರುವರಿ 10-11ರಂದು ‘ಮಾಶಾ ಆಂಡ್‌ ದಿ ಬೇರ್’ ತಂಡ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನ ಮಾಶಾ, ಬೇರ್ ಅಭಿಮಾನಿಗಳಿಗಾಗಿ ಎರಡು ದಿನ ಹಲವು ಪ್ರದರ್ಶನಗಳು ನಡೆಯಲಿವೆ.

ಪಾಲ್ಗೊಳ್ಳುವುದು ಹೇಗೆ?

‘ಮಾಶಾ ಆ್ಯಂಡ್‌ ದಿ ಬೇರ್’ ಷೋದಲ್ಲಿ ನೀವೂ ಪಾಲ್ಗೊಳ್ಳಬಹುದು. ನಿಮ್ಮ ಟಿಕೆಟ್‌ಗಳನ್ನು www.kidsdayout.co ದಲ್ಲಿ ಈಗಲೇ ಬುಕ್ ಮಾಡಬಹುದು. ಎಚ್‌ಎಸ್‌ಬಿಸಿ ಕಾರ್ಡ್‌ ಇರುವವರಿಗೆ ಷೋ ಪ್ರಾರಂಭವಾಗುವ 72 ಗಂಟೆಗಳಿಗೂ ಮುನ್ನ ತಮ್ಮ ಇಷ್ಟದ ಸೀಟ್‌ ಬುಕ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಷೋದ ಪಾತ್ರಗಳನ್ನು ಭೇಟಿಯಾಗಿ ಶುಭಾಶಯ ಕೋರುವ ಅವಕಾಶವನ್ನೂ ನೀಡಲಾಗುತ್ತಿದೆ. ಟಿಕೆಟ್ ದರದಲ್ಲಿಯೂ ವಿಶೇಷ ರಿಯಾಯತಿ ಇರುತ್ತದೆ. ಟಿಕೆಟ್ ಬುಕ್ ಮಾಡಿಕೊಂಡವರಿಗೆ ಪ್ರದರ್ಶನದ ಸ್ಥಳ, ಸಮಯದ ಮಾಹಿತಿಯನ್ನು ನೀಡಲಾಗುವುದು.

ಮಾಶಾ ಆ್ಯಂಡ್‌ ದಿ ಬೇರ್ ಭಾರತದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯವಾಗಿರುವ ಕಾರ್ಟೂನ್ ಸೀರೀಸ್‌. ಚಿಣ್ಣರ ಜತೆಯಲ್ಲಿ ಪೋಷಕರೂ ಕೂತು ನೋಡುವ ಈ ರಿಯಾಲಿಟಿ ಷೋದ ಪಾತ್ರಗಳೂ ಎಲ್ಲರಿಗೂ ಪರಿಚಿತವೇ ಆಗಿವೆ. ಈಗ ವಯಕಾಮ್‌ 18ಲೈವ್‌ ಅವುಗಳನ್ನು ನೇರವಾಗಿ ನೋಡುವ ಅವಕಾಶವನ್ನೂ ಮಾಡಿಕೊಡುತ್ತಿದೆ. ಕಳೆದ ವರ್ಷ, ‘ಪೆಪ್ಪಾ ಪಿಗ್‌ ಲೈವ್‌ ಷೋ’ ಕೂಡ ಇದೇ ರೀತಿ ಭಾರತದ ಬೇರೆ ಬೇರೆ ನಗರಗಳಲ್ಲಿ ಲೈವ್‌ ಪ್ರದರ್ಶನಗಳನ್ನು ನೀಡಿ ಯಶಸ್ವಿಯಾಗಿತ್ತು. ಅದೇ ದಾರಿಯಲ್ಲಿ ಈಗ ಮಾಶಾ ಆ್ಯಂಡ್‌ ದಿ ಬೇರ್ ಕೂಡ ನಡೆಯುತ್ತಿದ್ದು, ಜನರಿಗೆ ಮನರಂಜನೆಯ ರಸದೂಟವನ್ನು ಬಡಿಸಲು ಸರ್ವಸನ್ನದ್ಧವಾಗಿದೆ.

Exit mobile version