Site icon Vistara News

Mata Film | ಸ್ಯಾಂಡಲ್‌ವುಡ್‌ಗೆ ಬರಲು ಮತ್ತೊಂದು ಮಠ ರೆಡಿ

Mata Film

ಬೆಂಗಳೂರು : 16 ವರ್ಷಗಳ ಹಿಂದೆ ‘ನವರಸ ನಾಯಕ’ ಜಗ್ಗೇಶ್‌ ಮತ್ತು ಗುರುಪ್ರಸಾದ್‌ ಅವರ ಕಾಂಬಿನೇಷನ್‌ನಲ್ಲಿ ‘ಮಠ'(Mata Film) ಸಿನಿಮಾ ತೆರೆಕಂಡಿತ್ತು. ಅದು ಜಗ್ಗೇಶ್‌ ನಟನೆಯ 100ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಆ ʼಮಠʼ ಸ್ಯಾಂಡಲ್‌ವುಡ್‌ನ ಗುರು ಪ್ರಸಾದ್‌ ನಿರ್ದೇಶನದ ಸೂಪರ್ ಹಿಟ್‌ ಸಿನಿಮಾ. ಜಗ್ಗೇಶ್‌ ಹಾಗೂ ಗುರು ಪ್ರಸಾದ್‌ ಜುಗಲ್‌ ಬಂದಿಯ ಈ ಚಿತ್ರ ಪ್ರೇಕ್ಷಕರನ್ನು‌ ನಕ್ಕು ನಲಿಸಿತ್ತು.

ಇದೀಗ ಇದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ. ಹಾಗಂತ ಈ ಸಿನಿಮಾಗೂ ಆ ಸಿನಿಮಾಗೂ ಸಂಬಂಧವಿಲ್ಲ. ಇದೇ ಬೇರೆ ಅದೇ ಬೇರೆ. ಹೌದು, ಫಿಲಾಸಫಿಕಲ್‌, ಕಾಮಿಡಿ, ಸತ್ಯ ಘಟನೆಯಾಧಾರಿತ ರವೀಂದ್ರ ವೆಂಶಿ ನಿರ್ದೇಶನದ ʼಮಠʼ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ.

ಇದನ್ನೂ ಓದಿ | ವರಮಹಾಲಕ್ಷ್ಮಿ ಹಬ್ಬಕ್ಕೆ Raghavendra Storesಗೆ ಬನ್ನಿ: ʼನವರಸʼ ಸವಿಯಲು ಸಿದ್ಧರಾಗಿ

ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ಗುರು ಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ.

ಸತ್ಯ ಘಟನೆ ಆಧಾರಿತ ಈ ಸಿನಿಮಾ ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿದೆ. 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿರುವುದು ವಿಶೇಷ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Mata Film

ಸಾಧುಕೋಕಿಲಾ ಮಾತಾನಾಡಿ, ಸುಮಾರು 600ರಿಂದ 700 ಸಿನಿಮಾ ಮಾಡಿರಬಹುದು. ಜಾಸ್ತಿ, ಕಡಿಮೆ ಎರಡೂ ಇರಬಹುದು. ಆದರೆ ಗುರು ಪ್ರಸಾದ್ ಮಠ ಸಿನಿಮಾದಲ್ಲಿ ನಾನು ಒಂದೆರಡು ಸೀನ್‌ನಲ್ಲಿ ಮಾಡಿದ್ದೇನೆ. ಸಖತ್‌ ಹಿಟ್‌ ಕೂಡ ಆಗಿತ್ತು. ಆದರೆ ಈ ಮಠ ಸಿನಿಮಾದ ಕಥಾವಸ್ತು ಬೇರೆ. ನಾನು ಮೇಜರ್‌ ರೋಲ್‌ ಮಾಡಿದ್ದು, ಇದರಲ್ಲಿ ಕಾಮಿಡಿಯಾಗಿ ನಟಿಸಿಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಗುರು ಪ್ರಸಾದ್‌ ಮಾತನಾಡಿ, ಮನೆ ಕಟ್ಟುವುದು ಸುಲಭ. ಮಠ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡುವುದು ಕಷ್ಟ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಈ ಸಿನಿಮಾದ ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಮಠ ಸಿನಿಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿ, ಅವರು ಗ್ರೀನ್‌ ಸಿಗ್ನಲ್‌ ಕೊಟ್ಟ ಮೇಲೆಯೇ ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಜೀವನ್‌ಗೌಡ ಛಾಯಾಗ್ರಹಣ ಮಾಡುತ್ತಿದ್ದು, ರಾಜ್ಯಪ್ರಶಸ್ತಿ ವಿಜೇತ ಸಿ.ರವಿಚಂದ್ರನ್‌ ಸಂಕಲನ ಮಾಡುತ್ತಿದ್ದಾರೆ. ವಿ ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದು, ಯೋಗರಾಜ್‌ ಭಟ್‌, ವಿ‌ ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯ ಸಿನಿಮಾಕ್ಕಿದೆ.
ಇದನ್ನೂ ಓದಿ | UI : ಬುದ್ಧಿಯ ಬಿರುಗಾಳಿಯತ್ತ ರಿಯಲ್‌ ಸ್ಟಾರ್‌ ಉಪೇಂದ್ರ

Exit mobile version