Site icon Vistara News

Meenakshi Seshadri: 80ರ ದಶಕದ ʼನ್ಯಾಷನಲ್‌ ಕ್ರಶ್‌ʼ ಮತ್ತೆ ಬೆಳ್ಳಿತೆರೆಗೆ

meenakshi

meenakshi

ಮುಂಬೈ: 1983 ವರ್ಷ ಪ್ರತಿಯೊಬ್ಬ ಭಾರತೀಯರ ಪಾಲಿಗೆ ವಿಶೇಷ. ಮುಖ್ಯವಾಗಿ ಎರಡು ಕಾರಣಗಳಿಗಾಗಿ ಈ ವರ್ಷ ಸ್ಮರಣೀಯವಾಗಿರುತ್ತದೆ. ಮೊದಲನೆಯದಾಗಿ ಭಾರತೀಯ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವ ಚಾಂಪಿನ್‌ ಆಗಿ ಹೊರ ಹೊಮ್ಮಿತ್ತು. ಎರಡನೆಯದಾಗಿ, ಹಿಂದಿ ಚಿತ್ರರಂಗಕ್ಕೆ ಆಕರ್ಷಕ, ಪ್ರತಿಭಾನ್ವಿತ ನಟಿಯೊಬ್ಬರ ಪದಾರ್ಪಣೆಯಾಗಿತ್ತು. ಅವರೇ ನಗು ಮತ್ತು ನೃತ್ಯದ ಮೂಲಕ ಬಾಲಿವುಡ್‌ ಅನ್ನೇ ಆಳಿದ ಮೀನಾಕ್ಷಿ ಶೇಷಾದ್ರಿ (Meenakshi Seshadri). 1983ರಲ್ಲಿ ತೆರೆಕಂಡ ʼಪೈಂಟರ್‌ ಬಾಬುʼ (Painter Babu) ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಕಾಲಿಟ್ಟಿದ್ದರು. ಅದರಲ್ಲೂ ಡಿಸೆಂಬರ್ 16ರಂದು ಸುಭಾಷ್ ಘಾಯ್ ನಿರ್ದೇಶನದ ʼಹೀರೋʼ (Hero) ತೆರೆಕಂಡು ಮೀನಾಕ್ಷಿ ರಾತ್ರೋರಾತ್ರಿ ಜನಪ್ರಿಯರಾದರು. ಸದ್ಯ ಈ ಚಿತ್ರ 40 ವರ್ಷದ ಸಂಭ್ರಮದಲ್ಲಿದೆ.

ʼಹೀರೋʼ ಚಿತ್ರದಲ್ಲಿ ಅಭಿನಯಿಸಿದ ಅನುಭವವನ್ನು ಮೀನಾಕ್ಷಿ ಶೇಷಾದ್ರಿ ಹಂಚಿಕೊಂಡಿದ್ದಾರೆ. ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. “ಚಿತ್ರ ಅಷ್ಟರ ಮಟ್ಟಿಗೆ ಹಿಟ್‌ ಆಗಲು ಪ್ರತ್ಯೇಕವಾಗಿ ಇಂತಹದ್ದೇ ಒಂದು ಅಂಶ ಕಾರಣ ಎನ್ನಲಾಗದು. ಇಡೀ ಚಲನಚಿತ್ರ ತಂಡ ಒಗ್ಗಟ್ಟಿನಿಂದ ಕೆಲಸ ಮಾಡಿದ ಫಲವಾಗಿ ಯಶಸ್ಸು ಲಭಿಸಿತ್ತು. ʼಹೀರೋʼ ಚಿತ್ರ ಅಂದಿನ ಪ್ರೇಕ್ಷಕರ ಮೇಲೆ ಗಂಭೀರ ಪರಿಣಾಮ ಬೀರಿತ್ತು ಎನ್ನುವುದರಲ್ಲಿ ಸಂಶಯವಿಲ್ಲʼʼ ಎಂದು ಮೀನಾಕ್ಷಿ ಹೇಳಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಜಾಕಿ ಶ್ರಾಫ್ ಕೂಡ ʼಹೀರೋʼ ಚಿತ್ರದ ಮೂಲಕ ನಾಯಕರಾಗಿ ಬಣ್ಣದ ಲೋಕಕ್ಕೆ ಪರಿಚಿತರಾಗಿದ್ದರು. “ನಾನು ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೆ. ಆದರೆ ಇಷ್ಟರ ಮಟ್ಟಿಗೆ ನೋಡುಗರನ್ನು ಸೆಳೆಯುತ್ತದೆ ಎಂದು ಭಾವಿಸಿರಲಿಲ್ಲ. ರಾತ್ರೋರಾತ್ರಿ ಲಭಿಸಿದ ಯಶಸ್ಸಿನಿಂದ ಮೊದಲಿನಂತೆ ಮುಕ್ತವಾಗಿ ಓಡಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಜನರು ನನ್ನನ್ನು ಅದಾಗಲೇ ಗುರುತಿಸಲು ಪ್ರಾರಂಭಿಸಿದ್ದರು. ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಹೊಸ ಕಾರು, ಡ್ರೈವರ್‌, ಅಪಾರ್ಟ್‌ಮೆಂಟ್‌ ಎಲ್ಲವೂ ಲಭಿಸಿತು. ಹೀಗೆ 21 ವರ್ಷಕ್ಕೆ ನಾನು ನೆಲೆ ಕಂಡಿದ್ದೆʼʼ ಎಂದು ಮೀನಾಕ್ಷಿ ತಿಳಿಸಿದ್ದಾರೆ.

ಮೊದಲ ಆಯ್ಕೆ ಯಾರಾಗಿದ್ದರು?

ಇನ್ನೊಂದು ಮುಖ್ಯ ವಿಚಾರ ಎಂದರೆ ʼಹೀರೋʼ ಚಿತ್ರದ ನಾಯಕನ ಪಾತ್ರಕ್ಕೆ ಜಾಕಿ ಶ್ರಾಫ್‌ ಮೊದಲ ಆಯ್ಕೆಯಾಗಿರಲಿಲ್ಲ. ಸುಭಾಷ್ ಘಾಯ್ ಆರಂಭದಲ್ಲಿ ಈ ಪಾತ್ರಕ್ಕಾಗಿ ಪ್ರಸಿದ್ಧ ನಟ ಕಮಲ್ ಹಾಸನ್ ಅವರನ್ನು ಸಂಪರ್ಕಿಸಿದ್ದರು. ಆದರೆ ಕಾಲ್‌ಶೀಟ್‌ ಸಮಸ್ಯೆಯಿಂದಾಗಿ ಅವರು ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಸುಭಾಷ್ ಘಾಯ್‌ ಹೊಸಬರಿಗೆ ಅವಕಾಶ ನೀಡುವ ತೀರ್ಮಾನಕ್ಕೆ ಬಂದಿದ್ದರು. ಈ ಚಿತ್ರಕ್ಕೆ ಆರಂಭದಲ್ಲಿ ʼಸಂಗೀತ್ʼ ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ಹೀರೋ ಎಂದು ಬದಲಾಯಿಸಲಾಯಿತು ಎಂದು ಮೀನಾಕ್ಷಿ ಹೇಳಿದ್ದಾರೆ.

ಸುಭಾಷ್ ಅದ್ಭುತ ನಿರ್ದೇಶಕ

“ಸುಭಾಷ್ ಘಾಯ್ ಅದ್ಭುತ ನಿರ್ದೇಶಕʼʼ ಎಂದು ಮೀನಾಕ್ಷಿ ಬಣ್ಣಿಸಿದ್ದಾರೆ. ʼʼಕಲಾವಿದರಿಂದ ಹೇಗೆ ಅಭಿನಯ ಹೊರ ತೆಗೆಯಬೇಕು ಎನ್ನುವುದು ಸುಭಾಷ್‌ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಕಲಾವಿದರಿಗೆ ಸ್ವಾತಂತ್ರ್ಯ ನೀಡುತ್ತಿದ್ದರು. ಶಾಸ್ತ್ರೀಯ ನೃತ್ಯದ ಹಿನ್ನಲೆ ಹೊಂದಿರುವ ನನ್ನಿಂದ ಅಭಿನಯ ಹೊರ ತೆಗೆಯಬಹುದು ಎಂದು ಅವರು ವಿಶ್ವಾಸ ಇರಿಸಿದ್ದರುʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Salaar Release Trailer: ʻಸಲಾರ್‌ʼ ಎರಡನೇ ಟ್ರೈಲರ್‌ ಔಟ್‌; ಪ್ರಭಾಸ್‌ ದರ್ಬಾರ್‌ ಜೋರು!

ಮರಳಿ ಬೆಳ್ಳಿ ಪರದೆಗೆ

1995ರಲ್ಲಿ ಹರೀಶ್‌ ಮೈಸೂರು ಅವರನ್ನು ವರಿಸಿದ್ದ ಮೀನಾಕ್ಷಿ ಬಳಿಕ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿ ಅಮೆರಿಕಕ್ಕೆ ಹಾರಿದ್ದರು. ಇದೀಗ ಸುಮಾರು 27 ವರ್ಷಗಳ ಅಂತರದ ನಂತರ ಭಾರತಕ್ಕೆ ಮರಳಿದ್ದಾರೆ ಮತ್ತು ಶೀಘ್ರದಲ್ಲೇ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸ್ವತಃ ಅವರೇ ಘೋಷಿಸಿದ್ದಾರೆ. ಯಾವ ಚಿತ್ರ ಎನ್ನುವ ವಿವರ ಸದ್ಯದಲ್ಲೇ ಹೊರ ಬೀಳಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version